ಜ.26 ರಂದು ಬಂಟ್ವಾಳ ತಾಲೂಕಿನಿಂದ ಶ್ರೀ ಕ್ಷೇತ್ರ ಕಟೀಲಿಗೆ ಹೊರೆಕಾಣಿಕೆ
ಬಂಟ್ವಾಳ: ಶ್ರೀ ಕ್ಷೇತ್ರದಲ್ಲಿ ಜ.22 ರಿಂದ ಫೆ.3 ರವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾಯಾಗ, ಅಷ್ಟಪವಿತ್ರ ನಾಗಮಂಡಲ, ಕೋಟಿ ಜಪಯಜ್ಞಕ್ಕೆ ಪೂರಕವಾಗಿ ಜ.26 ರಂದು ಬಂಟ್ವಾಳ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ತಾಲೂಕು ಹೊರೆಕಾಣಿಕೆ ಸಮಿತಿ ವತಿಯಿಂದ ಬಿ.ಸಿ.ರೋಡಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೊರೆಕಾಣಿಕೆ ಬಗ್ಗೆ ಮಾಹಿತಿ ನೀಡಿದರು.
ಜ.22 ಶಿಬರೂರು, ಅತ್ತೂರು, ಕೊಡತ್ತೂರು, 23 ರಂದು ಮಂಗಳೂರು, 24 ರಂದು ಬಪ್ಪನಾಡು, ಉಳ್ಳಾಲ, ಬಜಪೆ, 25 ರಂದು ಕಾಸರಗೋಡು, ಸುಳ್ಯ, 27 ರಂದು ಪುತ್ರೂರು, ಕಾವೂರು,ಕಳತ್ತೂರು, 28 ರಂದು ಉಡುಪಿ, 29ರಂದು ಬೆಳ್ತಂಗಡಿ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.
ಜ.26 ರಂದು ಮಧ್ಯಾಹ್ನ ಬಂಟ್ವಾಳ ತಾಲೂಕಿನ ಸಮಸ್ತ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಿಸುವುದೆಂದು ತೀರ್ಮಾನಿಸಲಾಗಿದ್ದು ಅಂದು ಮಧ್ಯಾಹ್ನ 2.30ಕ್ಕೆ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಬಳಿ ಸಮಾವೇಷಗೊಂಡು ಅಲ್ಲಿಂದ ಕೈಕಂಬ ಪೊಳಲಿ ಧ್ವಾರದವರೆಗೆ ವೈಭವಯುತ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ಸಾಗಿ ಬರಲಿದೆ. ನಂತರ ಅಲ್ಲಿಂದ ವಾಹನದಲ್ಲಿ ಕ್ಷೇತ್ರಕ್ಕೆ ಸಾಗಲಿದೆ. ಅಂದು ಕ್ಷೇತ್ರಕ್ಕೆ ಬರುವವರಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸ್ವಾಮೀಜಿ ವಿವರಿಸಿದರು.
ತಾಲೂಕಿನ ಎಲ್ಲಾ ಆರಾಧನಾಲಯಗಳು, ಭಜನಾ ಮಂದಿರಗಳು, ಸಂಘಟನೆಗಳು, ಸಹಕಾರಿ ಸಂಸ್ಥೆಗಳ ಸಹಿತ ಪ್ರತಿ ಗ್ರಾಮದಿಂದ ಹೊರೆಕಾಣಿಕೆ ಕ್ಷೇತ್ರಕ್ಕೆ ಸಮರ್ಪಣೆಯಾಗಲಿದೆ. ಅಕ್ಕಿ, ಬೇಳೆಕಾಳುಗಳು, ತರಕಾರಿಗಳು, ತೆಂಗಿನಕಾಯಿ, ಹಿಂಗಾರ, ಬಾಳೆ ಎಲೆ ಇತ್ಯಾದಿ ವಸ್ತುಗಳನ್ನು ಭಕ್ತರು ಹೊರೆಕಾಣಿಕೆಯಾಗಿ ನೀಡಿ ಸಹಕರಿಸಬೇಕಾಗಿದೆ. ಕ್ಷೇತ್ರದ ಉತ್ಸವದ ಯಶಸ್ವಿಗಾಗಿ ಬಂಟ್ವಾಳ ತಾಲೂಕಿನ ಜನತೆ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.
ಭೂದಾನ ನಿಧಿ: ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ಸಂಪನ್ನಗೊಳ್ಳುವರೇ ಹೆಚ್ಚು ಸ್ಥಳಾವಕಾಶದ ಅಗತ್ಯವಿರುವ ಹಿನ್ನೆಲೆಯಲ್ಲಿ ಭೂದಾನ ಪ್ರಕ್ರಿಯೆ ನಡೆಯುತ್ತಿದ್ದು ಭೂದಾನಕ್ಕೆ ನಿಧಿ ನೀಡುವರೇ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಭಕ್ತರು ಶಾಶ್ವತ ಸೇವೆಯೊಂದನ್ನು ಕ್ಷೇತ್ರಕ್ಕೆ ಸಮರ್ಪಿಸಿದಂತಾಗುತ್ತದೆ ಎಂದರು.
ಸ್ವಾಗತ ಸಮಿತಿಯ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಹೊರೆಕಾಣಿಕೆ ಸಮಿತಿಯ ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ,ತಾರಾನಾಥ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿದ್ದರು.