ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
ಪುತ್ತೂರು: ಐನೂರು ವರ್ಷಗಳ ಹಿಂದೆ ತುಳುನಾಡಿನ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರ ಈಗ ಪುನರುತ್ಥಾನದ ಅಂತಿಮ ಘಟ್ಟದಲ್ಲಿದ್ದು, ಬ್ರಹ್ಮಕಲಶೋತ್ಸವದ ಸಿದ್ಧತೆ ಆರಂಭಗೊಂಡಿದೆ.
ದೇಯಿ ಬೈದ್ಯೆತಿ- ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿಯಲ್ಲಿ ಮುಂದಿನ ವರ್ಷದ (2020ರ) ಫೆಬ್ರವರಿ 26ರಿಂದ ಮಾರ್ಚ್ 2ವರೆಗೆ ಅದ್ದೂರಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
2017ರ ಫೆ. 19ರಂದು ಕ್ಷೇತ್ರದ ಪುನರುತ್ಥಾನಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. ತುಳುನಾಡು ಮಾತ್ರವಲ್ಲದೆ, ಬೆಂಗಳೂರು, ಮುಂಬೈ, ಗುಜರಾತ್, ದೆಹಲಿ ಮತ್ತು ವಿದೇಶಗಳಿಂದಲೂ ಸಾವಿರಾರು ಭಕ್ತರು ಅಂದಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಸ್ತುತ ಕ್ಷೇತ್ರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಕೋಟಿ ಚೆನ್ನಯರ ಮೂಲ ಮನೆಯಾದ ಗೆಜ್ಜೆಗಿರಿ ಮಾತೆ ದೇಯಿ ಬೈದ್ಯೆತಿಗೆ ಪುನರ್ಜನ್ಮ ನೀಡಿದ ತಾಣ. ಇದು ಗುರು ಸಾಯನ ಬೈದ್ಯರ ಕರ್ಮಭೂಮಿ. ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳ ಆರಾಧನೆ ಗೆಜ್ಜೆಗಿರಿಯಲ್ಲಿ ಐದು ಶತಮಾನಗಳ ಬಳಿಕ ಈಗ ಮೊದಲ ಬಾರಿ ನಡೆಯಲಿದೆ.
ಕೋಟಿ ಚೆನ್ನಯರನ್ನು ಆರಾಧಿಸುವ ಸುಮಾರು 247ರಷ್ಟು ಗರಡಿಗಳಿದ್ದು, ಅವೆಲ್ಲದಕ್ಕೂ ಕಲಶಪ್ರಾಯವಾಗಿ ಗೆಜ್ಜೆಗಿರಿ ಮೂಲಸ್ಥಾನ ಗರಡಿ ಮೂಡಿ ಬರಲಿದೆ. ಯಾಕೆಂದರೆ ಇದು ಕೋಟಿ ಚೆನ್ನಯರ ಮೂಲ ಮಣ್ಣು. ಇಲ್ಲಿ ತಾಯಿ ಮತ್ತು ಮಕ್ಕಳ ಸಮಾಗಮ ಆರಾಧನೆ ಕೌಟುಂಬಿಕ ತರವಾಡು ಚೌಕಟ್ಟಿನಲ್ಲಿ ನಡೆಯಲಿದೆ.
ಎಲ್ಲಿದೆ ಕ್ಷೇತ್ರ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿದೆ ಗೆಜ್ಜೆಗಿರಿ ಕ್ಷೇತ್ರ. ಐದು ಶತಮಾನಗಳ ಹಿಂದೆ ಇದು ಪಡುಮಲೆ ಬಲ್ಲಾಳರ ಸಂಸ್ಥಾನವಾಗಿದ್ದು, ಅದರ ವ್ಯಾಪ್ತಿಯಲ್ಲಿ ಬರುವ ಏರಾಜೆ ಬರ್ಕೆ ಎಂಬ ಪ್ರತಿಷ್ಠಿತ ಮನೆತನ ಇದಾಗಿತ್ತು. ಬಲ್ಲಾಳ ಅರಸರಿಗೆ ಸೈನ್ಯ ತಯಾರಿಸಿ ಕೊಡುತ್ತಿದ್ದ ಮನೆತನವಿದು. ಇದೇ ಮನೆ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಎಂದು ಹೆಸರಾಯಿತು. ಸಾಯನ ಬೈದ್ಯರು ಈ ಅವಳಿ ವೀರರ ಮಾವನವರಾಗಿ, ಮಾರ್ಗದರ್ಶಕರಾಗಿ, ಗುರುಗಳಾಗಿ ಕಂಗೊಳಿಸಿದವರು. ಅಯೋನಿಜೆಯಾಗಿ ಜನಿಸಿದ ಸುವರ್ಣ ಕೇದಗೆಯನ್ನು ಆಕೆಯ ಸಾಕು ತಂದೆ ಕಾಡಿನಲ್ಲಿ ಬಿಟ್ಟು ಹೋದ ಬಳಿಕ ಸಾಯನ ಬೈದ್ಯರು ಆಕೆಯನ್ನು ತಂಗಿಯಾಗಿ ಸ್ವೀಕರಿಸಿ ತನ್ನ ಗೆಜ್ಜೆಗಿರಿ ಮನೆಗೆ ಕರೆತಂದು ಸಾಕಿದ್ದಲ್ಲದೆ, ದೇಯಿ ಬೈದ್ಯೆತಿ ಎಂಬ ಹೆಸರು ನೀಡಿ, ಪ್ರಸಿದ್ಧ ನಾಟಿ ವೈದ್ಯೆಯಾಗಿ ರೂಪಿಸಿದರು. ಇದೇ ಮಾತೆ ಪಡುಮಲೆ ಬಲ್ಲಾಳನ ದುರಿತ ನಿವಾರಣೆ ಮಾಡಿದರು.
ಕರ್ಗಲ್ಲ ತೋಟ ಕಾಂತಣ್ಣ ಬೈದ್ಯರ ಮಡದಿಯಾದ ದೇಯಿ ಮಾತೆ ಮತ್ತೆ ಗೆಜ್ಜೆಗಿರಿ ಮನೆಗೆ ತುಂಬು ಗರ್ಭಿಣಿಯಾಗಿ ಬಂದಿದ್ದರು. ಇಲ್ಲಿರುವಾಗಲೇ ಆಕೆ ಪಡುಮಲೆ ಬಲ್ಲಾಳನ ದುರಿತ ನಿವಾರಣೆಗೆ ತೆರಳಿದ್ದು, ಅರಸ ಗುಣಮುಖನಾಗಿದ್ದು ಕಥಾನಕವಾಗಿದೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಅಕಾಲಿಕ ಮರಣಕ್ಕೆ ತುತ್ತಾದಾಗ ಸಹೋದರ ಸಾಯನ ಬೈದ್ಯರು ತಂಗಿಯ ಕಳೇಬರವನ್ನು ಗೆಜ್ಜೆಗಿರಿಗೆ ತಂದು ದಫನ ಮಾಡುತ್ತಾರೆ. ಆ ಸಮಾಧಿ ಇವತ್ತಿಗೂ ಗೆಜ್ಜೆಗಿರಿಯಲ್ಲಿದ್ದು, ದೇಯಿ ಬೈದ್ಯೆತಿ ಮಹಾಸಮಾಧಿ ಎಂಬ ಹೆಸರು ಪಡೆದುಕೊಂಡಿದೆ. ತಾಯಿಯನ್ನು ಕಳೆದುಕೊಂಡ ಕೋಟಿ ಚೆನ್ನಯರು ಮಾವನ ನೆರಳಲ್ಲಿ ಗೆಜ್ಜೆಗಿರಿಯಲ್ಲೇ ಬೆಳೆದು ಸಕಲ ವಿದ್ಯಾ ಪಾರಂಗತರಾಗಿ, ಕಾರಣಿಕ ಪುರುಷರಾಗಿ ಕಂಗೊಳಿಸಿದರು.
ಮಂತ್ರಿ ಬುದ್ಧಿವಂತನ ವಧೆ ಮಾಡಿದ ಬಳಿಕ ಪಂಜ, ಎಣ್ಮೂರಿಗೆ ತೆರಳುವ ಯಮಳರು ಅಪಾರ ಕಾರಣಿಕ, ಶೌರ್ಯ, ಪರಾಕ್ರಮ ತೋರಿಸುತ್ತಾರೆ. ಸತ್ಯ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಾರೆ. ಅಂದಿನಿಂದ ಅವರ ಗರಡಿ ಆರಾಧನೆ ಆರಂಭಗೊಂಡಿದೆ.
ಇದೀಗ ಮೊದಲ ಬಾರಿ ಗೆಜ್ಜೆಗಿರಿಯಲ್ಲಿ ಮೂಲಸ್ಥಾನ ಗರಡಿ ಮತ್ತು ಮಾತೆಯ ಸತ್ಯಧರ್ಮ ಚಾವಡಿ ನಿರ್ಮಾಣಗೊಂಡಿದ್ದು, ಕೊನೆಯ ಹಂತದ ಕಾಮಗಾರಿಗಳು ನಡೆಯುತ್ತಿದೆ. ಈಗಾಗಲೇ ವಿಶ್ವ ಮಟ್ಟದ ಭಕ್ತ ಸಮುದಾಯ ಕ್ಷೇತ್ರಕ್ಕೆ ನೆರವು ನೀಡಿದ್ದು, ಇನ್ನಷ್ಟು ಸಹಾಯ ಅಪೇಕ್ಷಿಸಲಾಗಿದೆ. ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ತನು- ಮನ- ಧನ ಸಹಾಯ ನೀಡಬೇಕೆಂದು ಕ್ಷೇತ್ರಾಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ವಿನಂತಿಸಿದೆ.
ಕ್ಷೇತ್ರದಲ್ಲಿ ಏನೆಲ್ಲ ಇದೆ?
- ಹಿಂದೆ ಕೋಟಿ ಚೆನ್ನಯರು, ದೇಯಿ ಬೈದ್ಯೆತಿ ಮತ್ತು ಸಾಯನ ಗುರುಗಳು ಬಾಳಿ ಬದುಕಿದ್ದ ಗೆಜ್ಜೆಗಿರಿಯ ಮೂಲ ಮನೆಯೇ ಇಂದು ಭವ್ಯವಾಗಿ ಪುನರುತ್ಥಾನಗೊಂಡಿದೆ. ಅದನ್ನು ಸತ್ಯಧರ್ಮ ಚಾವಡಿ ಎಂದು ಕರೆಯಲಾಗುತ್ತಿದೆ. ಈ ಚಾವಡಿಯ ಗರ್ಭ ಗುಡಿಯಲ್ಲಿ ದೇಯಿ ಬೈದ್ಯೆತಿಯ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.
- ಸತ್ಯಧರ್ಮ ಚಾವಡಿಯೊಳಗೆ ಈಶಾನ್ಯ ಭಾಗದಲ್ಲಿ ಸಾಯನ ಗುರುಗಳ ಗುರುಪೀಠ ಸ್ಥಾಪನೆಯಾಗಲಿದೆ.
- ಸಾಯನ ಗುರುಗಳ ಹಿರಿಯರ ಕಾಲದಿಂದಲೂ ಈ ಮಣ್ಣಿನಲ್ಲಿ ಆರಾಧನೆ ಪಡೆಯುತ್ತಿದ್ದ ಧರ್ಮದೈವ ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ದೈವಗಳ ಸಾನಿಧ್ಯ ಪುನರ್ ನಿರ್ಮಾಣಗೊಂಡಿದೆ.
- ಮಹಾಮಾತೆ ದೇಯಿ ಬೈದ್ಯೆತಿಯ ಸಮಾಧಿ ಬನ ರೂಪದಲ್ಲಿ ಸಂರಕ್ಷಣೆಯಾಗುತ್ತಾ ಬಂದಿದ್ದು, ಅದನ್ನೀಗ ಸುಂದರ ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗಿದೆ.
- ಪಡುಮಲೆ ಬಲ್ಲಾಳ ಅರಸನು ಮಾತೆ ದೇಯಿ ಬೈದ್ಯೆತಿಗಾಗಿ ಕಳುಹಿಸಿಕೊಟ್ಟಿದ್ದ ರಾಜ ದಂಡಿಗೆಯನ್ನು ಇರಿಸಿದ್ದ ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆಯನ್ನು ಸುಂದರವಾಗಿ ಮರು ನಿರ್ಮಿಸಲಾಗಿದೆ.
- ಗೆಜ್ಜೆಗಿರಿ ಶಿಖರಾಗ್ರದಲ್ಲಿ ಕೋಟಿ ಚೆನ್ನಯರ ಮೂಲಸ್ಥಾನ ಗರಡಿ ನಿರ್ಮಾಣವಾಗುತ್ತಿದೆ. ಗರಡಿಗೆ ಅಭಿಮುಖವಾಗಿ ಬೆರ್ಮೆರ್ ಗುಂಡ ತಲೆ ಎತ್ತಿದೆ.
ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ವಿವರ
- 2020ರ ಫೆಬ್ರವರಿ 26ರಂದು ಬೆಳಿಗ್ಗೆ ನೂತನ ಕೊಡಿಮರ ಪ್ರತಿಷ್ಠೆಯಾಗಲಿದೆ. ಇದರ ಬೆನ್ನಲ್ಲೇ ಧೂಮಾವತಿ, ಕುಪ್ಪೆ ಪಂಜುರ್ಲಿ, ಕಲ್ಲಾಲ್ದಾಯ ಮತ್ತು ಕೊರತಿ ದೈವಗಳ ಪುನರ್ ಪ್ರತಿಷ್ಠೆ ನಡೆಯಲಿದೆ.
- ಫೆ. 27ರಂದು ನಾಗಪ್ರತಿಷ್ಠೆ, ವಾಸ್ತುಹೋಮ ಇತ್ಯಾದಿ ಧಾರ್ಮಿಕ ವಿಧಾನಗಳು ನಡೆಯಲಿವೆ.
- ಫೆ.28ರಂದು ಬೆಳಿಗ್ಗೆ ಸತ್ಯಧರ್ಮ ಚಾವಡಿ ಮತ್ತು ಮೂಲಸ್ಥಾನ ಗರಡಿಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
- ಫೆ. 29ರಂದು ಬೆಳಿಗ್ಗೆ ಧ್ವಜಾರೋಹಣ ನಡೆದು ಧರ್ಮದೈವ ಧೂಮಾವತಿಯ ಹಗಲು ನೇಮೋತ್ಸವ ನಡೆಯಲಿದೆ. ಅದೇ ದಿನ ರಾತ್ರಿ ಪಂಜುರ್ಲಿ ಮತ್ತು ಇತರ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
- ಮಾರ್ಚ್ 1ರಂದು ರಾತ್ರಿ ಮೂಲಸ್ಥಾನ ಗರಡಿಯಲ್ಲಿ ನೇಮೋತ್ಸವ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ ಸೇವೆ, ತಾಯಿ- ಮಕ್ಕಳ ಭೇಟಿ ನಡೆಯಲಿದೆ.
- ಮಾರ್ಚ್ 2ರಂದು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸತ್ಯಧರ್ಮ ಚಾವಡಿಯಲ್ಲಿ ದೇಯಿ ಬೈದ್ಯೆತಿ ನೇಮೋತ್ಸವ ನಡೆಯಲಿದೆ.
- ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯಗಳು ನೆರವೇರಲಿವೆ.