ಮನೆ ಕಟ್ಟುತ್ತೀರಾ? “ಮಂಗ” ಮಾಡುತ್ತಾರೆ, ಜೋಕೆ!!! ಸ್ನೇಹಿತನ ಮಾತು ಕೇಳಿ ಮನೆ ಕಟ್ಟಿ ಮೋಸ ಹೋದ ಕೃಷ್ಣನ ಕರುಣಾಜನಕ ಕತೆ ಇದು!. ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್)-ಇಲ್ಲಿ ಕ್ಲಿಕ್ ಮಾಡಿರಿ

:

ಬಂಟ್ವಾಳ: ಮನೆ ಕಟ್ಟುತ್ತೀರಾ,”ಮಂಗ” ಮಾಡುತ್ತಾರೆ,ಜೋಕೆ!!!. ಮರಳು,ಮಣ್ಣು ಜಲ್ಲಿ, ಸಿಮೆಂಟ್,ಕೂಲಿ, ಕಬ್ಬಿಣದ ಹೆಸರಿನಲ್ಲಿ, ವಾಸ್ತು-ದೈವದೇವರ ಹೆಸರಿನಲ್ಲಿ, ಕೊನೆಗೆ ಪರ್ವ, ಮಾನೆಚ್ಚಿಲ್, ಪೂಜೆ, ಅಗೆಲ್ ….ಹೀಗೆ ಎಲ್ಲದರ ಹೆಸರಿನಲ್ಲಿ ಮೋಸ..ಮೋಸ…
ಮೋಸ…..!!!

ನಿಮ್ಮ ಹೊಸ ಪ್ರವೇಶಕ್ಕೆ ಒಂದೇ ದಾರಿಯಾದರೆ ಅವರ ಹಳೆಯ ಮೋಸದ ಪ್ರವೇಶಕ್ಕೆ ಹಲವು ದಾರಿ. ಈ ಇಡೀ‌ ಮನೆಯ ವ್ಯವಸ್ಥೆ ಹಿಂದೆ ಪ್ರಾಮಾಣಿಕವಾಗಿ ದುಡಿಯುವವರೆಂದರೆ ಕೂಲಿಕಾರ್ಮಿಕರು ಮಾತ್ರ. ಉಳಿದವರೆಲ್ಲ ತಂತ್ರ-ಯಂತ್ರ- ಕುತಂತ್ರ ಬುದ್ಧಿಗಳವರೇ…!!!! ಬೇರೆ ಬೇರೆ ಹೆಸರಿನಲ್ಲಿ ದೋಚುವವರೇ..!!!.

ಮನೆಯ ಕಟ್ಟುವ ವಿಷಯದಲ್ಲಿ ಸ್ವತಹ ಅನುಭವವಿಲ್ಲದಿದ್ದರೆ ನಾವು ಸೋಲುತ್ತೇವೆ, ಅರ್ಥಾತ್ ಎಲ್ಲರೂ ನಮ್ಮನ್ನು ಸೋಲಿಸುತ್ತಾರೆ. ಅದೂ ನಮಗೆ ಆ ಕ್ಷೇತ್ರದಲ್ಲಿ ಅನುಭವವಿಲ್ಲ ಅಥವಾ ನಾವು ಮೊದಲೇ ಸೋತಿದ್ದೇವೆಂದು ಗೊತ್ತಿದ್ದರೆ ಜನರು ಮತ್ತಷ್ಟು ನಮ್ಮನ್ನು ಸೋಲಿಸುತ್ತಾರೆ.

ಈ ಮನೆ ಕಟ್ಟುವ ಕಾಲದಲ್ಲಿ ಸಿಗುವಷ್ಟು “ಉಚಿತ ಸಲಹೆಗಾರರು” ಬೇರೆಲ್ಲೂ ನಿಮಗೆ ಸಿಗುವುದಿಲ್ಲ. ಬಾಗಿಲು ಅಲ್ಲಿಡಿ, ಕಿಟಕಿ ಇಲ್ಲಿಡಿ, ಅಡುಗೆ ಮನೆ ಅಲ್ಲಿರಲಿ, ಶೌಚಾಲಯ ಇಲ್ಲಿರಲಿ, ದೇವರ ಕೋಣೆ ಇಲ್ಲಿರಲಿ, ಆಯ ಅಷ್ಟಿರಲಿ….ಅಲ್ಲಿ ಲೋನ್ ಮಾಡಿ, ಇಲ್ಲಿ ಸಾಲ ಮಾಡಿ, ಅವರಿಗೆ ಗುತ್ತಿಗೆ ಕೊಡಿ, ಇವರನ್ನು ಮೇಸ್ತ್ರಿ ಮಾಡಿ, ಮಾನೆಚ್ಚಿಲ್ ಅವರು ಮಾಡಲಿ, ಕೋಲ ಇವರು ಮಾಡಲಿ, ಪೂಜೆ ಅವರು ಚೆನ್ನಾಗಿ ಮಾಡುತ್ತಾರೆ…….ಹೀಗೆ ಒಬ್ಬೊಬ್ಬರದ್ದು ಒಂದೊಂದು ಉಚಿತ ಸಲಹೆ, ಎಲ್ಲರೂ ಅನುಭವಿ ಇಂಜಿನಿಯರ್ ಗಳೇ, ಪ್ರಸಿದ್ಧ ಆಧ್ಯಾತ್ಮಿಕ ತಜ್ಞರೇ…!!! ಒಟ್ಟಿನಲ್ಲಿ ಮನೆ ಕಟ್ಟಿಸುವವನಿಗೆ ಕನ್ ಪ್ಯೂಶನ್, ಗೊಂದಲ..? ಯಾರು ಹಿತವರು ಇವರೊಳಗೆ? ಯಾರ ಮಾತು ಕೇಳುವುದು ಇವರೊಳಗೆ? ಅವರ ಮಾತು ಕೇಳಿದರೆ ಇವರಿಗೆ ಬೇಸರವಾದೀತೇ???. ಈ ಉಚಿತ ಸಲಹೆ ಕೊಡುವ ಮಹಾಬುದ್ದಿವಂತರು ನೀವು ಹಣದ ಸಮಸ್ಯೆ ಬಗ್ಗೆ ಮಾತಾಡುವಾಗ ಅಲ್ಲಿಂದ ಪರಾರಿಯಾಗುತ್ತಾರೆ. ಇನ್ನು ನೀವು ಅವರಲ್ಲಿ ಸಾಲ ಕೇಳುತ್ತಿರೋ ಎಂಬ ಭಯ ಅವರಿಗೆ. ಅಕಸ್ಮಾತ್ ನೀವು ಒಮ್ಮೆ ಅವರಲ್ಲಿ ದುಡ್ಡಿನ ಬಗ್ಗೆ ಪ್ರಸ್ತಾಪಿಸಿದರೆ ಸಾಕು ಮುಂದೆ ಅವರು ನಿಮ್ಮ ಬಳಿ ಬರುವುದಿಲ್ಲ-ಅವರ ಸಲಹೆಗಳು ಬಂದ್…!!! ಕಾರಿನ ಗ್ಲಾಸ್ ಗಳೂ ಬಂದ್…!!!

ಜನವರಿ ಬಂತೆಂದರೆ ನನಗೆ ನನ್ನ ಸ್ನೇಹಿತ ಕೃಷ್ಣನ ಹೊಸ ಮನೆ ನಿರ್ಮಾಣದ ಕತೆ ನೆನಪಾಗುತ್ತದೆ. ನೆನಪಾಗದಿದ್ದರೆ ಅವನೇ ನೆನಪು ಮಾಡುತ್ತಾನೆ. ಆ ಮನೆ ಕಟ್ಟಲು ಅವನು ಬಂದ ಕಷ್ಟ, ಪಂಚಾಯತಿಯ ಕೆಲವರ ವಿರೋಧ, ವಿವಾದದ ಸಂದರ್ಭದಲ್ಲಿ ಹಾಲಿ- ಮಾಜಿ ಶಾಸಕರ ಹೆಗಲು ಜಾರಿಸುವಿಕೆ, ಗುತ್ತಿಗೆದಾರರು ಮಾಡಿದ ಮೋಸ, ಪರಿಚಿತರೆನಿಸಿಕೊಂಡವರೇ ಮಾಡಿದ ಅನ್ಯಾಯ, ಮನೆ ಕಟ್ಟದಂತೆ ತಡೆ, ರಾಜಕಾರಣಿಗಳ ನಾಟಕ…ಇವೆಲ್ಲವನ್ನೂ ಮೀರಿಯೂ ಕೆಲವು ವ್ಯಕ್ತಿಗಳ ಪ್ರಾಮಾಣಿಕ ಬೆಂಬಲ…..ಹೀಗೆ ಮೋಸ-ತಂತ್ರ-ಕುತಂತ್ರಗಳು….. ಗ್ರಹ ಪ್ರವೇಶವಾಗಿ ಎರಡು ವರ್ಷವಾದರೂ ಈಗಲೂ ಒಂದೊಂದೇ ಕೃಷ್ಣನನ್ನು ಕಾಡುತ್ತಿದೆಯಂತೆ.

2022ನೇ ಜನವರಿ 17ರಂದು ಕೃಷ್ಣನ ಮನೆಯ ಗೃಹಪ್ರವೇಶ, ಎಲ್ಲ ಒತ್ತಡಗಳ‌ ನಡುವೆ. ಅದ್ದರಿಂದ ಪ್ರತಿವರ್ಷ ಜನವರಿಯಲ್ಲಿ ಅವನ ಮನೆಯ ವಿಷಯವೇ ಮುನ್ನೆಲೆಗೆ ಬರುತ್ತದೆ. ಪ್ರತಿವರ್ಷ ಯಾರಲ್ಲಾದರೂ ಹೇಳಿ ಅವನೊಡಲ ನೋವನ್ನು ಕಡಿಮೆ ಮಾಡುವ ಹಂಬಲ ಅವನ್ನದಾದರೆ, ಅನ್ಯಾಯವೆಸಗಿದವರ ಹೃದಯಕ್ಕೆ ಚುಚ್ಚಿ ಅವರು ಪಶ್ಚಾತ್ತಾಪಪಟ್ಟು ಎರಡು ಹನಿ ಕಣ್ಣೀರು ಹಾಕಿದರೆ ಸಾಕು, ಮತ್ತೆ ಮುಂದೆ ಇಂತಹ ಅನ್ಯಾಯ ನಾವು ಯಾರಿಗೂ ಮಾಡುವುದಿಲ್ಲವೆಂದು ಸಂಕಲ್ಪ ತೊಟ್ಟರೆ ಸಾಕು ಎನ್ನುವುದಷ್ಟೇ ನನ್ನ ಮನದ ಸಂಕಲ್ಪ ಎನ್ನುತ್ತಾನೆ ಕೃಷ್ಣ.

ಯಾಕೆಂದರೆ ನಮ್ಮೀ ಮನೆಯ ಹೆಸರಿನಲ್ಲಿ ಮುಖ್ಯವಾಗಿ ಗುತ್ತಿಗೆದಾರ ಆನಂದ ನಾರಾವಿ ಸೇರಿದಂತೆ ಇತರರು ನನ್ನನ್ನು ವಂಚಿಸಿದ್ದಾರೆ. ಕ್ಷಮಿಸಿ, ವಂಚಿಸಿದ್ದಲ್ಲ, ವಂಚನೆಗೊಳಗಾಗಿದ್ದೇನೆ. ಹಾಗೆಂದು ಅವರಲ್ಲಿ ದ್ವೇಷ ಸಾಧಿಸಿ, ಕೇಸು ದಾಖಲಿಸಿ ಮತ್ತಷ್ಟು ಕಳಕೊಳ್ಳುವಷ್ಟು ನಾನು ಶಕ್ತನಲ್ಲ. ಯಾರೆನೇ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುತ್ತಾರೆ ಎನ್ನುವುದು ನನ್ನ ನಂಬಿಕೆ ಎನ್ನುತ್ತಾನೆ ಆತ.

ಕೃಷ್ಣ ಆರ್ಥಿಕವಾಗಿ ಸಿರಿವಂತನೇನೂ ಅಲ್ಲ. ಸಾಲಸೂಲ ಮಾಡಿಯಾದರೂ ಚಿಂತೆ ಇಲ್ಲ, ನಮಗೂ ಒಂದು ಸ್ವಂತ ಮನೆ ಬೇಕು ಎಂದು ಎರಡು ವರ್ಷಗಳ ಹಿಂದೆ ಮಾಡಿದ ಯೋಚನೆ-ಯೋಜನೆಗೆ ಪಾಪ ಇನ್ನು ಮುಕ್ತಿ ಸಿಕ್ಕಿಲ್ಲ. ಹೇಳಿ ಕೇಳಿ ಪ್ರಸಿದ್ಧ, ಖ್ಯಾತ, ಅನುಭವಿ ಎಂದು ಕರೆಸಿಕೊಂಡಿರುವ ಗುತ್ತಿಗೆದಾರ ಆನಂದ ಮನೆಯನ್ನೇ ಇನ್ನೂ ಪೂರ್ತಿಗೊಳಿಸಿಲ್ಲ.

ಕೃಷ್ಣನಿಗೆ ಸಾಕಷ್ಟು ಮಂದಿ ಗುತ್ತಿಗೆದಾರರು, ಇಂಜಿನಿಯರ್ ಗಳು, ಮೇಸ್ತ್ರಿಗಳ ಪರಿಚಯ ಇದೆ. ಅವನ ಸಂಬಂಧಿಕರಲ್ಲೇ ಸಾಕಷ್ಟು ಮಂದಿ ಇದ್ದಾರೆ. ಎಲ್ಲಾ ವರ್ಗದಲ್ಲೂ ಪರಿಚಯದವರೇ. ಆದರೆ ಒಬ್ಬ ಪರಿಚಯದವರಿಗೆ/ ಸಂಬಂಧದವರಿಗೆ ಕೆಲಸ ಕೊಟ್ಟರೆ ಇತರರಿಗೆ ಬೇಸರ ಆಗುತ್ತದೆ ಅನ್ನುವ ಮನೋಭಾವನೆ ಕೃಷ್ಣನದು. ಅಲ್ಲದೆ ಬ್ಯಾಂಕ್ ಸಾಲ‌ ಮಾಡಿ ಮನೆ ಕಟ್ಟುವುದರಿಂದ, ಮೊದಲು ಹಣ ಕೊಡದೆ ಕೆಲವರು ಮನೆ ಕಟ್ಟಲು ಒಪ್ಪುವುದಿಲ್ಲ ಎನ್ನುವುದು ಇನ್ನೊಂದು ಕಾರಣ. ಈ ಸತ್ಯವನ್ನು ಅರಿತ ಕೃಷ್ಣನ ಆತ್ಮೀಯ ಸ್ನೇಹಿತ ಶಿವ ಮಾವಿನಕಟ್ಟೆ “ನೀವು ಐದು ಪೈಸೆ ಕೊಡಬೇಡಿ, ಮನೆ ಪೂರ್ಣ ಆದ ಮೇಲೆ ಎಲ್ಲಾ ಮೊತ್ತವನ್ನು ಒಮ್ಮೆಲೆ ಕೊಡಿ. ಅನುಭವಿ ಗುತ್ತಿಗೆದಾರರು ನನ್ನ ಸಂಬಂಧವರಿದ್ದಾರೆ” ಎಂದಾಗ ಕೃಷ್ಣನಿಗೂ ಒಂದಷ್ಟು ನಿಟ್ಟುಸಿರು.‌ ಇಷ್ಟು ಬಜೆಟ್ಟಿಗೆ ಇಷ್ಟು ಕೆಲಸ, ಮಧ್ಯದಲ್ಲಿ ಹಣ ಕೇಳಲು ಇಲ್ಲ ಎಂಬ ಒಪ್ಪಂದ. ಇಬ್ಬರಿಗೂ ಒಪ್ಪಿಗೆ. ಗುತ್ತಿಗೆದಾರರು, ಕೃಷ್ಣ ಮನೆಯವರು ಮತ್ತು ಶಿವನೇ ಈ ಒಪ್ಪಂದಕ್ಕೆ ಸಾಕ್ಷಿಯಾಗಿದ್ದರು. ಆದರೆ ಮುಂದೇನಾಯಿತು?

ತುರ್ತು ಗೃಹಪ್ರವೇಶ ಮಾಡಬೇಕಾದ ಅನಿವಾರ್ಯತೆಯಲ್ಲಿ ಗಡಿಬಿಡಿಯ ಕೆಲಸ, ದುಡ್ಡು ಕೊಡಿ-ಕೆಲಸ ಮುಂದುವರಿಸೋಣ ಎಂದು ಶಿವ ಮತ್ತು ಗುತ್ತಿಗೆದಾರರಿಂದ ಪದೇ ಪದೇ ಕಿರಿಕಿರಿ, ಸಾಲಕ್ಕಾಗಿ ಕೃಷ್ಣನ ಅಲೆದಾಟ, ಅಂತೂ ಆಗಾಗ್ಗೆ ಗುತ್ತಿಗೆದಾರರಿಗೆ ಹಣವೂ ಸಂದಾಯ.

ಆದರೂ ಆದದ್ದೇನು? ಅಂತೂ ಒಪ್ಪಂದ ಪ್ರಕಾರವಾದ ಪ್ಲ್ಯಾನಿಂಗ್ ಇಲ್ಲ, ಡಿಸೈನ್ ಇಲ್ಲ, ಒಪ್ಪಂದದ ಪ್ರಕಾರವಾದ ಮೊತ್ತದಷ್ಟು ಕೆಲಸ ಮುಗಿಸಿಲ್ಲ. ರೂಮುಗಳಿಗೆ ಬಾಗಿಲುಗಳಿಲ್ಲ-ಕಿಟಕಿಗಳಿಗೆ ಬಾಗಿಲುಗಳಿಲ್ಲ, ಇಂಟಿರಿಯರ್ ಎನ್ನುವ ಪದವೇ ಇಲ್ಲ, ಅಂತು ಮನೆಯವರ ಇಷ್ಟದಂತೆ ಅಲ್ಲ, ಗುತ್ತಿಗೆದಾರರ ಇಷ್ಟದ ಮನೆಯ ಹಸ್ತಾಂತರವಾಯಿತು ಕೃಷ್ಣನಿಗೆ. ಇನ್ನು ಯಾವ ಕೆಲಸ ಫೆಂಡಿಂಗ್ ಇದ್ದರೂ ಗ್ರಹಪ್ರವೇಶದ ನಂತರ ಮಾಡುತ್ತಾರೆ ಎಂಬ ನಂಬಿಕೆ ಕೃಷ್ಣನಿಗೆ.
ಬಾಕಿ ಉಳಿದ ಕೆಲಸ ಯಾವಾಗ ಮಾಡುತ್ತೀರಿ ಎಂದು ಕೇಳಿದರೆ “ಗ್ರಹಪ್ರವೇಶ” ಒಂದು ಮುಗಿಯಲಿ, ಉಳಿದ ಕೆಲಸವನ್ನು ವಾರದಲ್ಲಿ ಬಂದು ಮುಗಿಸಿಕೊಡುತ್ತೇವೆ ಎಂದು ಮನೆಯ ದೈವಾಂಗಣದಲ್ಲಿಯೇ ಮಾತುಕತೆ. ಗುತ್ತಿಗೆದಾರರು ಆ ರೀತಿ ಹೇಳಿದ ಮೇಲೆ ಒಪ್ಪದಿರಲು ನಾನು ಮನುಷ್ಯನಲ್ಲವೇ? ಎಂದು ಈಗಲೂ ಪ್ರಶ್ನಿಸುತ್ತಾನೆ ಕೃಷ್ಣ.

ಇದು ಎರಡು ವರ್ಷಗಳ ಹಿಂದಿನ ಕತೆ. ಅಂದು ಭರವಸೆ ಕೊಟ್ಟ ಶಿವ ಮತ್ತು ಗುತ್ತಿಗೆದಾರ ಆನಂದ ಇಂದಿನ ತನಕ ನಮ್ಮತ್ತ ಮುಖ ಮಾಡಿ ನೋಡಿಲ್ಲ. ಸಾವಿರ ಕರೆ ಮಾಡಿದರೂ ಸ್ವೀಕರಿಸಿಲ್ಲ. ಕೊನೆಗೊಮ್ಮೆ ಖಾರವಾಗಿ ಬರೆದು ಸಂದೇಶ ಕಳುಹಿಸಿದಾಗ “ವಾರದೊಳಗೆ ಬರುತ್ತೇನೆ, ಸ್ವಲ್ಪ ಬ್ಯುಸಿಯಾಗಿದ್ದೆ. ಬಾಕಿ ಇರುವ ಎಲ್ಲಾ ಕೆಲಸವನ್ನು ಮಾಡಿಕೊಡುತ್ತೇನೆ” ಎಂದವರು ಇದುವರೆಗೂ ಇತ್ತ ನೋಡಿಲ್ಲ. ಇತ್ತ ನೋಡಲು ಆಗದಂತಹ ಪಶ್ಚಾತ್ತಾಪ ಒಳಗಿಂದೊಳಗೆ ಅವರನ್ನು ಕಾಡುತ್ತಿದೆ. “ಬನ್ನಿ ನಾನು ಎಲ್ಲದಕ್ಕೂ ಸಿದ್ಧ, ಬದ್ಧ” ಎಂದು ಆಗಲೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಆದರೆ ನನ್ನೆದುರು ಬಂದು ನಿಲ್ಲುವ ದಮ್ಮು ತಾಕತ್ತು ಆ ಮನುಷ್ಯನಿಗಿಲ್ಲ. ಯಾಕೆಂದರೆ ನನ್ನ ಮನೆಯ ವಿಷಯದಲ್ಲಿ ಅವರು ಅಷ್ಟು ದೋಚಿದ್ದಾರೆ,ಇಡೀ ವ್ಯವಸ್ಥೆಯಲ್ಕಿ ನಮ್ಮನ್ನು ಮೋಸಗೊಳಿಸಿದ್ದಾರೆ. ಮತ್ತೆ ಅವರು ಹೇಗೆ ನಮ್ಮ ಮನೆಗೆ ಬರುತ್ತಾರೆ ಎಂದು ಪ್ರಶ್ನಿಸುತ್ತಾನೆ ಕೃಷ್ಣ.

ಮನೆಯ ಗ್ರಹಪ್ರವೇಶವಾಗಿ ಎರಡು ವರ್ಷ ಹತ್ತು ದಿನವಾಯಿತು ಇಂದಿಗೆ. ಪೂರ್ಣಗೊಳ್ಳದ ಕಾಮಗಾರಿಯ ಕಡೆ ನೀರು ಚೆಲ್ಲುವುದು, ಕಿಟಕಿ ಬಾಗಿಲುಗಳಿಲ್ಲದೆ ಮಕ್ಕಳು ಭಯಪಡುವುದು, ಟೈಲ್ಸ್ ತುಂಡಾಗಿ ಬೀಳುವುದು, ಇದ್ದ ಬಾಗಿಲು ಹಾಕಲಾಗದಿರುವುದು ಇಂತಹ ಸಮಸ್ಯೆಗಳು ಶಾಶ್ವತವಾಗಿರುವುದು ಬಿಟ್ಟರೆ ಅಂದಿನಿಂದ ಇಂದಿನವರೆಗೆ ಸ್ನೇಹಿತ ಕೃಷ್ಣನ ಮನೆ ಒಂಚೂರು ಬದಲಾಗಿಲ್ಲ. ಬದಲಾಗಬೇಕಾದರೆ ಹಣ ತೆಗೆದುಕೊಂಡು ಹೋದವರು ಇತ್ತ ಬರಬೇಕಲ್ವ? ತುಳುನಾಡಿನ ಶಕ್ತಿಗಳು ಮನಸ್ಸು ಕೊಟ್ಟಾದರೂ ಇಂದಲ್ಲ ನಾಳೆ ಗುತ್ತಿಗೆದಾರ, ಮೇಸ್ತ್ರಿ, ಶಿವ ಯಾರಾದರೂ ಬರಬಹುದೆಂದು ಮನೆಮಂದಿ ಕಾಯುತ್ತಲೇ ಇದ್ದಾರೆ. ಅವರೆಲ್ಲರೂ ಈಗಲೂ ಕೃಷ್ಣನ ಮನೆಯ ಎದುರೇ ರಸ್ತೆಯಲ್ಲಿ‌ ಪಾಸಾಗುತ್ತಿದ್ದಾರೆ.

ಇನ್ನೂ ಒಂದು ರೀತಿಯ ಮೋಸ. ಇಲ್ಲಿಯ ಸ್ಥಳೀಯ ಕೆಲವು ವ್ಯಕ್ತಿಗಳಿಂದ ಗುತ್ತಿಗೆದಾರರು ಕೆಲವು ಫೀಸ್ ವರ್ಕ್ ಮಾಡಿಸಿಕೊಂಡಿದ್ದಾರೆ. ಅವರಿಗೂ ಇದುವರೆಗೂ ಗುತ್ತಿಗೆದಾರರು ಹಣ ಕೊಟ್ಟಿಲ್ಲವೆಂದು ಮತ್ತೆ ಗೊತ್ತಾಯಿತಂತೆ, ಅವರಿಗೂ ಸಾಲಸೂಲ ಮಾಡಿ ಅಲ್ಪಸ್ವಲ್ಪ ಹಣ ಕೃಷ್ಣ ಕೊಡುತ್ತಿದ್ದಾನೆ. ಎಂತಹಾ ಅನ್ಯಾಯ. ಬಡವರ ಮನೆಯ ಶಾಪ ಇಂತಹ ನಯವಂಚಕರಿಗೆ ತಟ್ಟದಿದ್ದಿತೇ? ಅಂತೂ ಯಾವ ಗುತ್ತಿಗೆದಾರ, ಯಾವ ಮೇಸ್ತ್ರಿ, ಯಾವ ರಾಕ್ಷಸನೂ ಮಾಡದ ಘೋರ ಅನ್ಯಾಯ ಬಡಕುಟುಂಬವೊಂದಕ್ಕೆ ಮಾಡಿ ಗುತ್ತಿಗೆದಾರನ ಕುಟುಂಬ ಐಷಾರಾಮವಾಗಿ ಮೆರೆಯುತ್ತಿದೆ. ಅವರಿಗೆ ಸದ್ಭುದ್ಧಿ ಕೊಟ್ಟು ಆ ಮನೆಗೆ ಬಂದು ದೈವದೇವರ ಮುಂದೆ ಶರಣಾದರೆ ಸಾಕು ಎಂದು ಬೇಡುತ್ತಾನೆ, ಮನೆಯ ನೆಪದಲ್ಲಿ ಸ್ನೇಹಿತರನ್ನು ನಂಬಿ ಸೋತು ಸುಣ್ಣವಾದ ನನ್ನ ಆತ್ಮೀಯ ಮಿತ್ರ ಕೃಷ್ಣ.

ಹಾಗೆಂದು ಕೆಲವರು ಕೇಳುತ್ತಾರಂತೆ, ನಿಮಗೆ ಕಾನೂನು ಹೋರಾಟ ಮಾಡಬಹುದಲ್ಲವೇ ಎಂದು. ಅವನಿಗೆ ಎಲ್ಲಾ ಕಾನೂನು, ಹೋರಾಟ, ನ್ಯಾಯ, ಅನ್ಯಾಯ, ಯಾವಾಗ? ಏನು ಮಾಡಬೇಕು ಎಲ್ಲವೂ ಗೊತ್ತು. ಅದರ ಹಿಂದೆ ಎಷ್ಟು ಅಲೆದಾಡಬೇಕೆನ್ನುವುದು ಗೊತ್ತು. ಒಂದು ನಾಲ್ಕೈದು ಮಾಧ್ಯಮಗಳಲ್ಲಿ ಗುತ್ತಿಗೆದಾರರು ಮತ್ತು ಸ್ನೇಹಿತನ ಪೊಟೊ ಹಾಕಿ ಮಾನ ಮಾರ್ಯಾದೆ ಹರಾಜು ಮಾಡಲೂ ಗೊತ್ತು. ಆದರೆ ಕಾನೂನು-ಹೋರಾಟ, ಇವೆಲ್ಲಕ್ಕಿಂತ ಮಿಗಿಲಾದುದು ಮನುಷ್ಯತ್ವ, ಮಾನವೀಯತೆ. ಎಲ್ಲರಿಗೂ ಅವರದ್ದೇ ಆದ ಜೀವನ, ಕುಟುಂಬ, ಮನೆಮಂದಿ, ಸ್ಥಾನ‌ಮಾನ ಇದೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಅವರ ಕುಟುಂಬ ಬಲಿಯಾಗಬಾರದು ಅಷ್ಟೇ. ನನ್ನ ಸ್ನೇಹಿತನಿಗಿರುವ ಈ ಮಾನವೀಯ ಗುಣ ಅನ್ಯಾಯ ಮಾಡಿದವರಲ್ಲೂ ಬೆಳೆಯಲಿ, ಮುಂದಕ್ಕೆ ಬಡವರಿಗೆ ಈ ರೀತಿಯ ಅನ್ಯಾಯ ಎಲ್ಲೂ ನಡೆಯದಿರಲಿ ಎಂಬುವುದು ಈ ಬರಹದ ಒಟ್ಟು ಆಶಯ.
……………
ಇದೊಂದು ಕತೆನೇ ಬೇರೆ. ದೇವರು, ಧರ್ಮ, ದೈವಗಳ ಆರಾದನೆಗೆ ಸಂಬಂಧಿಸಿದ ವಿಚಿತ್ರ ಕತೆಯಿದು..ಇಲ್ಲಿಯೂ ಮೋಸ.
ಈ ಜಾತಕ, ಜ್ಯೋತಿಷ್ಯ, ವಾಸ್ತು ಇತ್ಯಾದಿಗಳಲ್ಲಿ ಕೃಷ್ಣನಿಗೆ ನಂಬಿಕೆ ಕಡಿಮೆ. ಆದರೆ ಮನೆಯವರ ಒತ್ತಡಕ್ಕೆ ಮಣಿದು ವಾಸ್ತು ತೋರಿಸಲು ಒಪ್ಪಿಕೊಂಡಾಗ ಅದೇ ಶಿವ ಅಂದು ಆರಂಭದಲ್ಲಿ “ಯಾರು ಬೇಡ, ನಮ್ಮ ಗುತ್ತಿಗೆದಾರರು ಎಲ್ಲದರಲ್ಲೂ ಅನುಭವಿ, ಅವರ ವಾಸ್ತು ಪರ್ಫೆಕ್ಟ್” ಎಂದಾಗ ಕೃಷ್ಣ ಮರು ಮಾತಾಡದೆ ಸುಮ್ಮನಾದ..ಮನೆಯ ವಾಸ್ತು, ಆಯ ಇತ್ಯಾದಿಗಳ ಎಲ್ಲಾ ಜವಾಬ್ಧಾರಿ ಆನಂದ ಮತ್ತು‌ ಶಿವನಿಗೆ. ಇನ್ನು ಭಟ್ಟರ ಸಲಹೆಯಂತೆ ಪೂಜೆ, ವಾಸ್ತುಹೋಮ, ಸತ್ಯನಾರಾಯಣ ಪೂಜೆ, ಪೂಜಾರಿಯ ಸಲಹೆಯಂತೆ ದೈವಗಳಿಗೆ ಮಾನೆಚ್ಚಿಲ್. “ತಿಂಗಳು ಮೂರು ಕಳೆಯುವುದರೊಳಗೆ ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ” ಎಂಬ ದೈವದ ನುಡಿ. ಮಾತುಕತೆಯಾಗುವಾಗ “ನೀವು ಕೊಟ್ಟಷ್ಟು ಸಾಕು” ಎಂದಿದ್ದ ಪುರೋಹಿತ ವರ್ಗ ಮತ್ತು ದೈವರಾದಕ ವರ್ಗ….ಹೀಗೆ ಒಂದೊಂದು ಟೀಂ…ಅದರಲ್ಲೂ ಗುತ್ತಿಗೆಯೇ. ಪ್ರತೀ ಟೀಂಗೆ ಇಪ್ಪತ್ತರ ಮೇಲೆಯೇ. ಎಲ್ಲರೂ ದೋಚಿದ್ದೇ, ದೋಚಿದ್ದು. ಬೇಕಾದಷ್ಟು ತಿಂದದ್ದು, ಒಂದಷ್ಟು ಕೊಂಡು ಹೋದದ್ದು. ಪಾಪ, ಬ್ಯಾಂಕ್ ಸಾಲದ ದುಡ್ಡು ಸ್ವಲ್ಪ ಕೃಷ್ಣನ ಕೈಯಲ್ಲಿ ಇತ್ತಲ್ಲ, ಇವನು ತೆಗೆದುಕೊಟ್ಟದ್ದೇ ಕೊಟ್ಟದ್ದು. ಅಂತೂ ಇಂತೂ ಅರ್ಥಪೂರ್ಣವಾಗಿ, ಸರಳವಾಗಿ ಆಗಬೇಕೆಂದು ನಿರ್ಧರಿಸಿದ ಗೃಹಪ್ರವೇಶ ಕೆಲವು ಅನುಭವಿ ಉಚಿತ ಸಲಹೆಗಾರರಿಂದ ಅದ್ದೂರಿಯಾಗಿ ಸಂಪನ್ನ.

ಅಂತೂ ಅಂದಿನದ ಇಂದಿನವೆರೆಗೂ ಕೃಷ್ಣನ ಮನೆಯಲ್ಲಿ ಒಂದಲ್ಲೊಂದು ಸಮಸ್ಯೆ ತಪ್ಪಿಲ್ಲ. ಆರೋಗ್ಯ, ಆರ್ಥಿಕ…ಮನೆಯಲ್ಲಿ ನೆಮ್ಮದಿಯಿಲ್ಲ, ಶಾಂತಿಯಿಲ್ಲ. ಇತ್ತೀಚೆಗೆ ನಾಲ್ಕು ತಿಂಗಳಿನಿಂದ ಕೃಷ್ಣನಿಗೆ ಅನಾರೋಗ್ಯ. ಹೋಗದ ಅಸ್ಪತ್ರೆಯಿಲ್ಲ, ಕಾಣದ ವೈದ್ಯರಿಲ್ಲ. ಮತ್ತೆ ಮನೆಮಂದಿಯ ಒತ್ತಡಕ್ಕೆ ಮಣಿದು ಪ್ರಶ್ನೆ, ಉತ್ತರ, ದರ್ಶನ‌ಸೇವೆ, ಬಲಿಮೆ, ಜ್ಯೋತಿಷ್ಯ ಕೇಳುವಿಕೆ-ತಿರುಗಾಟ-ಪರದಾಟ. ಮಾಟ-ಮಂತ್ರ, ಶತ್ರುಭಾದೆ, ಮದ್ದು‌ಹಾಕಿದ್ದು, ಪ್ರೇತಭಾದೆ, ವಶೀಕರಣ, ಕಳೆಯುವುದು, ಕೂಡಿಸುವುದು…ಹೀಗೆ ಒಂದೊಂದು ಕಡೆಯಲ್ಲಿ ಒಂದೊಂದು. ಪ್ರತಿಯೊಂದು ಕಡೆಗೂ ಪರಿಹಾರಕ್ಕಾಗಿ ಮತ್ತೆ ಸಾಲ ಮಾಡಿ ಒಂದಷ್ಟು ಹಣ ಸುರಿಯುವಿಕೆ….ಇಲ್ಲಿಯೂ ಮೋಸವೇ.
ಜತೆಯಲ್ಲಿಯೇ ನಡೆಯುತ್ತಿದೆ ಆಲೋಪತಿ-ಆರ್ಯುವೇದ ವೈದ್ಯರ ಔಷಧೋಪಚಾರ.

ಮೊನ್ನೆ ಮೊನ್ನೆ ಕೃಷ್ಣನ ಮನೆಗೆ ಪ್ರಸಿದ್ಧ ವಾಸ್ತು ತಜ್ಞರೊಬ್ಬರು ದೇವಿ ಆರಾದಕರ ಜತೆಯಲ್ಲಿ ಕೃಷ್ಣನ ಮನೆಗೆ ಬಂದರಂತೆ. ಮನೆಯವರೆಲ್ಲ ಇದ್ದರು ಕೃಷ್ಣನ ಜತೆಯಲ್ಲಿ. ಮನೆಯೆಲ್ಲ ಸುತ್ತಾಡಿದ ವಾಸ್ತುಶಿಲ್ಪಿ ಒಂದೆಡೆ ಕುಳಿತು ಮಾತು ಮುಂದುವರಿಸಿದರು:
ಗುತ್ತಿಗೆದಾರವರ್ಗ, ಪುರೋಹಿತ ವರ್ಗ, ದೈವರಾದಕ ವರ್ಗ, ನಾಗಬೀದಿ…ಹೀಗೆ ಎಲ್ಲಾ ವಿಷಯದಲ್ಲೂ ಆದ ಅನ್ಯಾಯ ಮತ್ತು ಅದಕ್ಕೆ ಪರಿಹಾರವನ್ನು ವಾಸ್ತುತಜ್ಞರು ಸೂಚಿಸಿದರು. ಕೆಲವೊಂದು ಸಲಹೆಗಳಲ್ಲಿ ವೈಜ್ಞಾನಿಕ ಹಿನ್ನೆಲೆಯಿರುವುದರಿಂದ ಒಪ್ಪತಕ್ಕದ್ದೇ.

ಈಗ ಕೃಷ್ಣನ ಮುಂದೆ ಸವಾಲಿದೆ. ಯಾರನ್ನು ನಂಬಲಿ? ಯಾರನ್ನು ದೂರಲಿ? ಒಂದೆಡೆ ಗುತ್ತಿಗೆದಾರರ ಮೋಸ, ಅದು ಆಗಿರಲಿ. ಪುರೋಹಿತ ವರ್ಗ ಮತ್ತು ದೈವರಾದಕ ವರ್ಗದವರು “ಸರಿ” ಇದ್ದರೆ ಮನೆಯಲ್ಲಿ, ದೈವದೇವರ ವಿಷಯದಲ್ಲಿ ದೋಷಗಳಾಗಿದ್ದರೆ ಮುಂಚಿತವಾಗಿಯೇ ಅವರಿಗೆ ತಿಳಿಸಬಹುದಿತ್ತಲ್ಲವೇ? ಅದು ಎರಡು ವರ್ಷದ ನಂತರ ಗೊತ್ತಾಗಬೇಕೇ? ಇಲ್ಲ, ಇಲ್ಲಿ ಎಲ್ಲಾ ಬ್ಯುಸಿನೆಸ್ಸೆ, ಎಲ್ಲರೂ ಗುತ್ತಿಗೆದಾರರೇ.

ಈಗ ಸ್ನೇಹಿತನ ನಂಬಿಕೆಯಿಂದ ಮನೆಕಟ್ಟಿ ಮೋಸ ಹೋದ, ಪುರೋಹಿತವರ್ಗ ಮತ್ತು ದೈವರಾದಕ ವರ್ಗದಿಂದ ವಂಚನೆಗೊಳಗಾದ ಕೃಷ್ಣ ಮತ್ತು ಮನೆಯವರ ಕಣ್ಣೀರು ಅನ್ಯಾಯ ಮಾಡಿದವರಿಗೆ ತಟ್ಟೀತೇ?. ಮನೆ ಕಟ್ಟುತ್ತೀರಾ? “ಮಂಗ” ಮಾಡುತ್ತಾರೆ, ಜೋಕೆ…!!!!
——-+++++++——–++++++
ಯುವಧ್ವನಿ ನ್ಯೂಸ್ ಕರ್ನಾಟಕ