ಇವರು ನೊಂದು ಬೆಂದು ಬಂದವರಿಗೆ ಸಾಂತ್ವನ, ನಿರಾಶಾವಾದಿಗಳಿಗೊಂದು ಆಶಾಕಿರಣ, ಡಾ.ಪಿ.ಕೆ.ಕಿರಣ್ ಕುಮಾರ್ ಗೆ ನೂರೊಂದು ನಮನ
ಮಂಗಳೂರು: ಇವರ ಹೆಸರಲ್ಲೇ ಇದೆ ಕಿರಣ ಅಂದರೆ ಬೆಳಕು. ನಿಜಕ್ಕೂ ಇವರು ಮಾನಸಿಕವಾಗಿ ನೊಂದವರ ಬದುಕಿಗೊಂದು ಹೊಂಬೆಳಕೇ ಸರಿ. ಪಿ.ಕೆ.ಕಿರಣ್ ಕುಮಾರ್ ಎಂದರೆ ದೊಡ್ಡ ದೇಹ, ದಪ್ಪ ಮೀಸೆ, ಅದೇನೋ ಗಟ್ಟಿತನ, ಗಡಸು ಧ್ವನಿ…ಇಂಗೆಲ್ಲಾ ಭಾವಿಸಿದರೆ ನಮ್ಮ ಊಹೆ ತಪ್ಪು. ಅವರು ಮೋಡ ಕವಿದ ವಾತಾವರಣದಲ್ಲಿನ ಕಿರಣದಂತೆ ಲಘು ಬಿಸಿ, ಆದರೆ ತಣ್ಣನೆಯ ತಂಗಾಳಿ. ಹಿತಮಿತವಾದ ಮಾತು, ಮೃಧುತ್ವದ ಮೆಲುದನಿ, ಗಂಭೀರವದನರಂತೆ ಕಂಡರೂ ಹೃದಯದಲ್ಲಿ ಸಹೃದಯತೆ, ಮನಸ್ಸಿನಲ್ಲಿ ಮಾನವೀಯತೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಕಿರಣದ ಪ್ರಜ್ವಲತೆಯ ಕೀರ್ತಿ, ಸರ್ವರಲ್ಲೂ ಸಂಪ್ರೀತಿ. ಇವಿಷ್ಟೇ ಅಲ್ಲ, ಕಿರಣರ ಸೇವೆ, ಸಾಧನೆ ಅಪಾರ. ಅವರು ಎಜೆ ಇನ್ಸಿಟ್ಯಿಟ್ಯೂಟ್ ಆಫ್ ಸೈಕ್ಯಾಟ್ರಿ ವಿಭಾಗದ ಪ್ರಾಧ್ಯಾಪಕರು, ಇಂಡಿಯನ್ ಸೈಕ್ಯಾಟ್ರಿ ಸೊಸೈಟಿಯ ಕರ್ನಾಟಕದ ಮಾಜಿ ಅಧ್ಯಕ್ಷರು…ಹೀಗೆ ಮುಂದುವರಿಯುತ್ತದೆ ಅವರ ಅಚ್ಯುವ್ ಮೆಂಟ್ ಜರ್ನಿ. ಆದರೆ ನಾನಿಲ್ಲಿ ಎರಡು ಮೂರು ಭೇಟಿಯಲ್ಲಿ ಕಂಡುಕೊಂಡ ಅನುಭವದ ತುಣುಕುಗಳನ್ನಷ್ಟೇ ದಾಖಲಿಸಿದ್ದೇನೆ. ಇಷ್ಟೆನಾ ಎಂದು ಭಾವಿಸಿ ಸುಮ್ಮನಾಗಬೇಡಿ, ಅವರನ್ನು ಹತ್ತಿರದಿಂದ ಇನ್ನಷ್ಟು ಅಧ್ಯಯನ ಮಾಡಿ, ಕಿರಣದ ಲೋಕ ಮತ್ತಷ್ಟು ತೆರೆದುಕೊಳ್ಳುತ್ತದೆ. ಹಾಗೆಂದು ಇವರು ಸಿದ್ಧರು, ಪ್ರಸಿದ್ಧರು. ಆದರೆ ಜನಪ್ರಿಯರಲ್ಲ ಜನಪರರು, ಜೀವಿಪರರು. ಎಲ್ಲವೂ ಪಕ್ಕಾ ಕಮರ್ಷಿಯಲ್ ಆಗಿರುವ ಈ ಕಾಲಘಟ್ಟದಲ್ಲಿಯೂ ಒಂದಷ್ಟು ಮಾನವೀಯ ಮೌಲ್ಯ, ಜೀವಪರ ಕಾಳಜಿ ಇರಿಸಿಕೊಂಡವರೆನ್ನುವುದು ನಮ್ಮ ಹೆಮ್ಮೆ. ಇಂತಹ ವೈದ್ಯರನ್ನು ಪಡೆದ ನಾವು ನಿಜಕ್ಕೂ ಧನ್ಯರು, ಭಾಗ್ಯವಂತರು
ಎಸ್..ಇಷ್ಟೆಲ್ಲ ಬರೆದ ಮೇಲೆ ಈ ಪಿ.ಕೆ.ಕಿರಣ್ ಕುಮಾರ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆಂದು ಸ್ವಲ್ಪ ನೋಡೋಣವೇ? ಮಂಗಳೂರು ಮೆರಿಹಿಲ್ ಕಾಮತ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಒಂದನೇ ಮಹಡಿ, ಫಳ್ನಿರ್ ಮಿಲೆನಿಯಮ್ ಟವರ್ನ ಎರಡನೇ ಮಹಡಿಯಲ್ಲಿ ಅದಿತ್ ಕಿರಣ್ ನ್ಯೂರೋ ಸೈಕ್ಯಾಟ್ರಿ ಮತ್ತು ಕೌನ್ಸೆಲಿಂಗ್ ಸೆಂಟರ್ ಇದೆ. ಇಲ್ಲಿ ನರಮಾನಸಿಕ ರೋಗಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಸೇವೆಗಳು ಲಭ್ಯವಿದೆ. ನ್ಯೂರೋ ಸೈಕ್ಯಾಟ್ರಿ, ಕೌನ್ಸೆಲಿಂಗ್, ಡಿಅಡಿಕ್ಷನ್, ರಿಹಾಬಿಲಿಟೇಶನ್, ಡೇ ಕೇರ್, ಮೆಡಿಕಲ್……ಇವೆಲ್ಲ ಇಲ್ಲಿನ ಪ್ರಮುಖ ಸೇವೆಗಳು. ಅಷ್ಟೇ ಪ್ರಮಾಣದ ಸಿಬ್ಬಂದಿಗಳು.
ಇಲ್ಲಿನ ಸಿಬ್ಬಂದಿಗಳ ಸೇವೆಯೂ ಅನನ್ಯವಾದುದು, ಅಪಾರವಾದುದು. ನಗುಮೊಗದ ತ್ವರಿತ ಸೇವೆ, ಯಾರೂ ರೋಗಿಗಳಲ್ಲ, ನಮ್ಮ ಆಗೆ ಸಹಜ ಜೀವಿಗಳೆಂಬ ಭಾವನೆಯಲ್ಲಿ ಮಾನವೀಯತೆಯ ಸ್ಪಂದನೆ, ಕರ್ತವ್ಯದಲ್ಲಿ ದಕ್ಷತೆ, ಸೇವೆಯಲ್ಲಿ ಪ್ರಾಮಾಣಿಕತೆ, ವ್ಯಕ್ತಿತ್ವದಲ್ಲಿ ಸನ್ನಡತೆಯನ್ನು ಮೈಗೂಡಿಸಿಕೊಂಡಿರುವ ಇಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿ ಈ ಕೇಂದ್ರ ಹಾಗೂ ವೈದ್ಯರ ಹಿರಿಮೆಗೆ ಗರಿ ಮೂಡಿಸುವಂತದ್ದು.
ಈ ಬರಹ ಇಲ್ಲಿಗೆ ಮುಗಿಸೋಣವೆಂದರೆ ಅದು ಅಪೂರ್ಣ. ಈ ಬರಹದ ಹಿಂದೆ ಕಮರ್ಷಿಯಲ್ ಉದ್ದೇಶವಿಲ್ಲ. ಡಾಕ್ಟರ್ ನನ್ನಲ್ಲಿ ತೋರಿದ ಹೃದಯ ವೈಶ್ಯಾಲ್ಯತೆ, ಮಾನವೀಯತೆ, ತುಂಬಿದ ಆತ್ಮವಿಶ್ವಾಸ, ಅವರ ಭರವಸೆಯ ಮಾತುಗಳು ಈ ಬರಹಕ್ಕೆ ಪ್ರೇರಣೆ. ನನಗಾದ ಪ್ರಯೋಜನ ಸಮಸ್ಯೆ ಇದ್ದ ಇತರರಿಗೂ ದೊರೆಯಲಿ ಎನ್ನುವುದಷ್ಟೇ ಈ ಬರದ ಆಶಯ.
ಹೌದು, ನಾನು ನಾಲ್ಕು ತಿಂಗಳಿನಿಂದ ಕೆಲವು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದವ. ಬರೆಯುವ, ಭಾಷಣ ಮಾಡುವ, ತರಬೇತಿ ಮಾಡುವ, ಕೌನ್ಸೆಲಿಂಗ್ ಮಾಡುವ, ನಿರೂಪಕನಾಗಿರುವ, ಪತ್ರಕರ್ತನೂ ಆಗಿರುವ ಎಲ್ಲಾ ಸಾಮರ್ಥ್ಯಗಳು ನನ್ನಲ್ಲಿದ್ದರೂ ಏನೂ ಮಾಡಲಾಗದೇ ಮನೆಗೆ ಅಂಟಿಕೊಂಡವ. ಕಾಣದ ವೈದ್ಯರಿಲ್ಲ, ಸುತ್ತಾಡದ ಅಸ್ಪತ್ರೆಯಿಲ್ಲ, ಸಾಲಸೂಲ ಮಾಡಿ ಎಲ್ಲಾ ಕಡೆ ಹಣ ಚೆಲ್ಲಿತೇ ಹೊರತು ಗುಣ ಮಾತ್ರ ಶೂನ್ಯ. ನೋವು ಸಹಿಸುವಂತಿಲ್ಲ, ನಡೆಯುವ ಆಗಿಲ್ಲ, ಒಬ್ಬಂಟಿಯಾಗಿ ಎಲ್ಲೂ ಹೋಗುವ ಆಗಿಲ್ಲ, ಅಬ್ಬಾ ಅದನ್ನು ನೆನೆದರೆನೇ ಮೈ ಬೆವರುತ್ತದೆ. ಕೊನೆಗೇನು ಮಾಡುವುದು ಅಲ್ಲಿದ್ದು, ಇಲ್ಲಿದೆಂದು ಒಂದಷ್ಟು ಗುಳಿಗೆ ನುಂಗುತ್ತಾ ಸತ್ತರೆ ಸಾಯಲಿ, ಬದುಕಿದರೆ ಬದುಕಲಿ ಎಂದು ಪರ್ಮನೆಂಟ್ ಹಾಸಿಗೆ ಹಿಡಿದೆ.
ಈ ಸಂದರ್ಭ ನನ್ನ ಹೆಂಡತಿಯ ಸೋಧರ ತಂಗಿ ಮೂಲಕ ಪರಿಚಿತರಾದವರೇ ಪಿಕೆ ಕಿರಣ್ ಕುಮಾರ್.
ಇಲ್ಲೂ ಇನ್ನೇನೋ, ಅದೇ ಕತೆ ಇರಬಹುದೆಂದು ಭಾವಿಸಿ ಒಳಹೊಕ್ಕೆ. ಆರಂಭದ ಭೇಟಿಯಲ್ಲಿ ಯೇ ಅದೇನೋ ಸೆಳೆತ, ಸಮಾಧಾನ, ಒಂದಷ್ಟು ದೈರ್ಯ. ಬದುಕುವುದೇ ಇಲ್ಲ ಎಂದುಕೊಂಡವನಿಗೆ ಇಲ್ಲೇನೋ ಭವಿಷ್ಯದ ಕನಸು ಚಿಗುರತೊಡಗಿತು. ತುಂಬಾ ಮಾತಾಡಬೇಕು, ಎಲ್ಲಾ ಹೇಳಬೇಕು ಎಂದುಕೊಂಡರೆ ಅವರೂ ಜಾಸ್ತಿ ಮಾತಾಡಲಿಲ್ಲ, ಅದ್ದರಿಂದ ನನಗೂ ಮಾತನಾಡಲು ಅವಕಾಶ ಸಿಗಲಿಲ್ಲ. ಸಮಾಧಾನವಾಗಲಿಲ್ಲ. ಇರಲಿ, ಮಾತಾಡದೆಯೇ ವರ್ತನೆ ಗಮನಿಸಿಯೇ ಉಪಚರಿಸುತ್ತಾರೋ ಎಂದುಕೊಂಡು ಮನೆಮಂದಿಯೊಂದಿಗೆ ಮನೆಗೆ ಬಂದೆ. ಮತ್ತೆ ಎರಡನೇ ಭೇಟಿ, ಮೂರನೇ ಭೇಟಿ. ಅವರದ್ದು ಅಷ್ಟೇ ಮಾತು, ಮಾತಾಡದಿದ್ದರೂ ಸಾವಧಾನವಾಗಿ ಆಲಿಸುತ್ತಾರಲ್ಲ, ಕೇಳಬೇಕಾದನ್ನೆಲ್ಲ ಕೇಳುತ್ತಾರಲ್ಲ, ಎಂಬ ಖುಷಿ ನನಗೆ.
ಈ ಮೂರು ಭೇಟಿಯ ನಡುವೆ ನನ್ನಲಾದ ಬದಲಾವಣೆಯನ್ನು ಮನೆಮಂದಿ ಗಮನಿಸಿದರು. ನನ್ನ ಬಗೆಗಿನ ಭರವಸೆಯನ್ನೇ ಕಳೆದುಕೊಂಡಿದ್ದ ಅವರು ಸಮಾಧಾನದ ನಿಟ್ಟುಸಿರು ಬಿಟ್ಟರು. ನಾನೇ ನನ್ನನ್ನು ಗಮನಿಸುತ್ತಾ ಇದ್ದೇನೆ. ಸಾಕಷ್ಟು ಬದಲಾವಣೆ ಕಂಡಿದ್ದೇನೆ. ಈಗ ನೂರಕ್ಕೆ ನೂರು ಅಲ್ಲದಿದ್ದರೂ ಮೂರು ವಾರದಲ್ಲಿ ಶೇಖಡಾ ಅರವತ್ತು ಫಲಿತಾಂಶ ಬಂದ ತೃಪ್ತಿ ನನಗಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವಾದರೂ ಒಂದಿಷ್ಟು ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಎಲ್ಲಾ ಕಡೆಯಿಂದಲೂ ಒತ್ತಡಗಳು ಕೇಳಿ ಬರುತ್ತಿರುವ ಈ ಕಾಲದಲ್ಲಿ ಬದುಕಿನಲ್ಲೊಂದು ಬದ್ಧತೆ, ಮನದಲ್ಲೊಂದು ಮಾನವೀಯತೆಯನ್ನು ಉಳಿಸಿಕೊಂಡು ಒತ್ತಡದ ಬದುಕಿನಲ್ಲಿಯೂ ತಾಳ್ಮೆ, ಸಹನೆಯನ್ನು ಕಳೆದುಕೊಳ್ಳದೆ ತನ್ನ ಬಳಿ ಬರುವವರಿಗೊಂದಿಷ್ಟು ಮಾತೃ ಹೃದಯದ ಪ್ರೀತಿಯನ್ನು ಧಾರೆಯೆರೆಯುವ ಕಿರಣ್ ಸರ್ ಗೊಂದು ಬಿಗ್ ಸೆಲ್ಯೂಟ್. ಬದುಕಿನ ಭರಸೆಯನ್ನು ಕಳೆದುಕೊಂಡಿದ್ದ ನನ್ನ ಬದುಕಿನಲ್ಲೊಂದು ನವಬೆಳಕು ಮೂಡಿಸಿದ ಕಿರಣರಿಗೆ ನೂರು ನಮನ.
———+++++++++-++++++++
ಗೋಪಾಲ ಅಂಚನ್
ಹಿರಿಯ ಪತ್ರಕರ್ತರು
ಮೊ: 9449104318