ವಾಮದಪದವು ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಯಾಕಿಲ್ಲ-ಪ್ರತಿಭಟನೆಗೆ ಸಿದ್ಧರಾಗುತ್ತಿದ್ದಾರೆ ಪ್ರಯಾಣಿಕರು !!!.

ಗೋಪಾಲ ಅಂಚನ್
ಯುವಧ್ವನಿ ನ್ಯೂಸ್ ಕರ್ನಾಟಕ

ಬಂಟ್ವಾಳ: ಆರ್ಥಿಕವಾಗಿ, ಸಾಮಾಜಿಕವಾಗಿ ಸಹಿತ ಬಹುಸ್ತರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಮದಪದವು ಪೇಟೆಗೆ ಇನ್ನೂ ಸರಕಾರಿ ಬಸ್ಸು ಸೌಲಭ್ಯ ಕಲ್ಪಿಸದಿರುವ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ತಕ್ಷಣ ಬಸ್ಸು ಸೌಲಭ್ಯ ಒದಗಿಸದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿ.ಸಿ.ರೋಡು-ಕಾಡಬೆಟ್ಟು- ವಾಮದಪದವು ರಸ್ತೆಗೆ ಹೆಚ್ಚುವರಿ ಬಸ್ಸು ಒದಗಿಸಬೇಕು, ಮತ್ತು ಈಗಾಗಲೇ ಇರುವ ಒಂದು ಬಸ್ಸಿನ ಅವ್ಯವಸ್ಥಿತ ಸಂಚಾರವನ್ನು ಸರಿಪಡಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ ಪ್ರದೇಶಗಳಲ್ಲಿ ವಾಮದಪದವು ಕೂಡ ಒಂದು. ಇಲ್ಲಿ ಅಂಗನವಾಡಿಯಿಂದ ಹಿಡಿದು ಸರಕಾರಿ ಹಿರಿಯ, ಪ್ರೌಢ, ಪದವಿಪೂರ್ವ,ಪದವಿ ಕಾಲೇಜುಗಳಿವೆ. ಪೂರಕವಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿ ನಿಲಯಗಳಿವೆ. ಅಭಿವೃದ್ದಿಯಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ದಿನೇ ದಿನೇ ಬೆಳೆಯುತ್ತಿರುವ ವಾಮದಪದವಿಗೆ ಇನ್ನೂ ಸಮರ್ಪಕ ರೀತಿಯಲ್ಲಿ ಸರಕಾರಿ ಬಸ್ಸು ಸೌಲಭ್ಯ ಸೇವೆ ಲಭ್ಯವಿಲ್ಲದಿರುವುದು ದುರಂತವೆನ್ನುತ್ತಾರೆ ಇಲ್ಲಿನ ನಾಗರಿಕರು.

ವಾಮದಪದವು ಪ್ರಗತಿ‌ ಪಥದಲ್ಲಿ‌ ಮುನ್ನಡೆಯುತ್ತಿರುವ ಪ್ರದೇಶ. ಇಲ್ಲಿ ಏನಿಲ್ಲವೆಂದರೆ ಎಲ್ಲವೂ ಇದೆ. ಪ್ರಾಥಮಿಕದಿಂದ ಹಿಡಿದು ಪದವಿ ಶಿಕ್ಚಣದವರೆಗಿನ ಶೈಕ್ಷಣಿಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಪಡಿತರ ಸೌಲಭ್ಯಗಳು, ಅಸ್ಪತ್ರೆಗಳು… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಿ.ಸಿ.ರೋಡಿನಿಂದ ನಾಲ್ಕೈದು ರಸ್ತೆ ಮೂಲಕ ವಾಮದಪದವಿಗೆ ಖಾಸಗಿ ಬಸ್ಸುಗಳ ಸಂಚಾರವಿದೆ. ಹತ್ತಾರು ಹಳ್ಳಿಗಳ ಜನರು ನಿತ್ಯ ವ್ಯವಹಾರಗಳಿಗಾಗಿ ವಾಮದಪದವು ಪೇಟೆಯನ್ನು ಅವಲಂಬಿಸಿದ್ದಾರೆ. ಬಸ್ಸು ಸಂಚಾರವಿಲ್ಲದ ಬಹುತೇಕ ಸಂದರ್ಭಗಳಲ್ಲಿ ಜನರು ಹೆಚ್ಚು ಹಣ ಪಾವತಿಸಿ ರಿಕ್ಷಾವನ್ನೇ ಅವಲಂಬಿಸಬೇಕಾಗುತ್ತದೆ. ಇಲ್ಲವಾದರೆ ಪಾದಯಾತ್ರೆಯೇ ಗತಿ. ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಖಾಸಗಿಯವರದ್ದೇ ಕಾರುಬಾರು, ಬಂದರೆ ಬಂದಾರು, ಇಲ್ಲದಿದ್ದರೆ ಹೋದಾರು, ಹೇಳುವವರಿಲ್ಲ, ಕೇಳುವವರಿಲ್ಲ. ಅದು ಖಾಸಗಿಯವರ ಸ್ಥಿತಿ, ಇರಲಿ ಬಿಡೋಣ.
ಆದರೆ ಸರಕಾರಿ ಬಸ್ಸುಗಳ ಬಗ್ಗೆ ಕೇಳುವ ಹಕ್ಕು ಪ್ರಯಾಣಿಕರಿಗಿದೆ. ಸಂಪರ್ಕ ವ್ಯವಸ್ಥೆ ಪ್ರಮುಖ ಮೂಲಭೂತ ಹಕ್ಕು. ಆದರೆ ವಾಮದಪದವು ಎಂಬ ಪೇಟೆಯನ್ನು ಕೆಎಸ್ ಆರ್ ಟಿಸಿ ಯಾಕೋ ನಿರ್ಲಕ್ಷ್ಯ ಮಾಡಿದೆಯೋ? ಮಾಡುತ್ತಿದೆಯೋ? ಗೊತ್ತಿಲ್ಲ. ಕೆಎಸ್ ಆರ್ ಟಿಸಿ ಅಧಿಕಾರಿಗಳು ಹಾಗೂ ಖಾಸಗಿಯವರ ಹೊಂದಾಣಿಕೆಯೇ ದೇವರೇ ಬಲ್ಲ. ಇವತ್ತು ಬಹುತೇಕ ಚಿಕ್ಕ ಗ್ರಾಮಗಳಿಗೂ ಸರಕಾರಿ ಬಸ್ಸು ಸೌಲಭ್ಯವಿದೆ. ಆದರೆ ಬೆಳೆಯುತ್ತಿರುವ ಪೇಟೆ ವಾಮದಪದವಿಗೆ ಆ ಭಾಗ್ಯವಿಲ್ಲ. ಇದರಿಂದಾಗಿ ಇಲ್ಲಿಂದ ಬೇರೆ ಬೇರೆ ರಸ್ತೆಗಳಲ್ಲಿ ಬಿ.ಸಿ.ರೋಡು, ಮೂಡಬಿದ್ರೆ, ಬಂಟ್ವಾಳ, ಮಂಗಳೂರು, ಬೆಳ್ತಂಗಡಿ ಮೊದಲಾದೆಡೆಗಳಿಗೆ ಸಂಚರಿಸುವ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಇತರ ಸೌಲಭ್ಯಗಳೂ ಸಿಗುತ್ತಿಲ್ಲ.

ಬಿ.ಸಿ.ರೋಡಿನಿಂದ ಕುದ್ಕೋಳಿ ವಾಮದಪದವು, ಬಿ.ಸಿ.ರೋಡಿನಿಂದ ಪಂಜಿಕಲ್ಲು ವಾಮದಪದವು, ಬಿ.ಸಿ.ರೋಡಿನಿಂದ ಮಣಿಹಳ್ಳ ವಾಮದಪದವು, ಬಿ.ಸಿ.ರೋಡಿನಿಂದ ವಗ್ಗ ವಾಮದಪದವು ಹಾಗೂ ಬಿ.ಸಿ.ರೋಡಿನಿಂದ ಮೂರ್ಜೆ ವಾಮದಪದವು…ಹೀಗೆ ಸಾಕಷ್ಟು ಮಾರ್ಗಗಳಿದೆ. ಈ ಪೈಕಿ ಬಿ.ಸಿ.ರೋಡು ವಗ್ಗ ವಾಮದಪದವು ಬಿಟ್ಟರೆ ಇನ್ಯಾವುದೇ ಮಾರ್ಗದಲ್ಲಿ ಸರಕಾರಿ ಬಸ್ಸು ಸೌಲಭ್ಯ ಇಲ್ಲ. ಇಲ್ಲ ಎನ್ನುವುದಕ್ಕೆ ಯಾಕೆ ಎಂಬುದರ ಬಗ್ಗೆ ಯಾರಲ್ಲೂ ಸಮರ್ಪಕ ಉತ್ತರವಿಲ್ಲ. ಈ ಮಾರ್ಗಗಳು ಹತ್ತಾರು ಚಿಕ್ಕ ಚಿಕ್ಕ ಪೇಟೆ, ಹಳ್ಳಿಗಳನ್ನು ಬೆಸೆಯುತ್ತಾ ಪಟ್ಟಣ ಪ್ರವೇಶಿಸುತ್ತದೆ. ನಿತ್ಯ ಈ ಮಾರ್ಗಗಳಲ್ಲಿ ವಿದ್ಯಾರ್ಜನೆಗಾಗಿ, ಉದ್ಯೋಗಕ್ಕಾಗಿ, ವ್ಯವಹಾರಕ್ಕಾಗಿ ಪಟ್ಟಣಕ್ಕೆ ಪ್ರಯಾಣಿಸುತ್ತಾರೆ. ಅವರೂ ದುಬಾರಿ ದರ ಪಾವತಿಸಿ( ಉದಾಹರಣೆಗೆ ಸರಕಾರಿ ಬಸ್ಸಿನಲ್ಲಿ ವಾಮದಪದವಿನಿಂದ ಬಿ.ಸಿ.ರೋಡಿಗೆ 20 rs ಆದರೆ ಖಾಸಗಿ ಬಸ್ಸುಗಳಲ್ಲಿ 30rs. ) ಖಾಸಗಿ ಬಸ್ಸುಗಳನ್ನೋ, ಆಟೋ ರಿಕ್ಷಾಗಳನ್ನು ಅವಲಂಬಿಸಬೇಕು. ಈ ರಸ್ತೆಗಳಿಗೆ ಕನಿಷ್ಟ ಒಂದೊಂದು ಬಸ್ಸು ವ್ಯವಸ್ಥೆ ಕಲ್ಪಿಸಿದರೂ ಪ್ರಯಾಣಿಕರಿಗೆ ಬಲು ಪ್ರಯೋಜನವಾಗುತ್ತದೆ. ಇದು ಸರಕಾರಿ ಬಸ್ಸುಗಳ ಸಂಪರ್ಕವೇ ಇಲ್ಲದ ರಸ್ತೆಗಳ ಕತೆಯಾದರೆ ಒಂದು ಸರಕಾರಿ ಬಸ್ಸಿನ ಭಾಗ್ಯವಿರುವ ವಾಮದಪದವು, ಕಾಡಬೆಟ್ಟು, ಬಿ.ಸಿ.ರೋಡು, ಮಂಗಳೂರು ಬಸ್ಸಿನ ಕತೆಯಂತೂ ಶೋಚನೀಯವೇ ಸರಿ.
ಈ ಬಸ್ಸನ್ನು ವಿದ್ಯಾರ್ಥಿಗಳ ಸಹಿತ ನಿತ್ಯ ಉದ್ಯೋಗಸ್ಥರು, ಇತರ ವ್ಯವಹಾರ ವಹಿವಾಟುಗಳಿಗೆ ಹೋಗುವವುರು ಅವಲಂಬಿಸಿದ್ದಾರೆ. ಯಾಕೆಂದರೆ ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳೂ ಇಲ್ಲ. ಆದರೆ ಇರುವ ಒಂದು ಸರಕಾರಿ ಬಸ್ಸಿನ ಪ್ರಯಾಣಕ್ಕೆ ದಿಕ್ಕು ದೆಸೆಯೇ ಇಲ್ಲ. ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎನ್ನುವುದು ಗ್ಯಾರಂಟಿ ಇಲ್ಲ, ಬೆಳಿಗ್ಗೆ ಬಂದರೂ ಅದು ಬಿ.ಸಿ.ರೋಡಿನ ತನಕವೋ ಮಂಗಳೂರಿಗೆ ಹೋಗುವುದೋ ಎಂದು ಗೊತ್ತಾಗುವುದು ಬಸ್ಸಿಗೆ ಹತ್ತಿದ ಮೇಲೆಯೇ. ಕೆಲವೊಮ್ಮೆ ಬಿ.ಸಿ.ರೋಡಿಗೆ ಮುಟ್ಟಿದ ಮೇಲೆಯೇ. ಇನ್ನು ಸಂಜೆ ಸಾಕಷ್ಟು ಮಂದಿ ಹಳ್ಳಿಗೆ ಬರಲು ಈ ಬಸ್ಸನ್ನು ಬಿ.ಸಿ.ರೋಡಿನಲ್ಲೋ, ಮಂಗಳೂರಿನಲ್ಲೋ ಕಾಯುತ್ತಿರುತ್ತಾರೆ. ಕೆಲವೊಮ್ಮೆ ಜನ ಮಂಗಳೂರಿನಲ್ಲಿ ಕಾದರೆ ಈ ಬಸ್ಸು ಇಲ್ಲಿ ಬಿ.ಸಿ.ರೋಡಿನಿಂದ ಹೋಗಿರುತ್ತದೆ. ಇವತ್ತೂ ಬಿ.ಸಿ.ರೋಡಿನಿಂದಲೇ ಹೊರಡುತ್ತದೆ ಎಂದು ಮಂಗಳೂರಿನಿಂದ ಬೇರೆ ಬಸ್ಸಲ್ಲಿ ಬಂದು ಕಾದರೆ ಅವತ್ತು ಅದು ಮಂಗಳೂರಿನಿಂದಲೇ ಬರುತ್ತದೆ. ಕೆಲವು ದಿನವಂತೂ ಎಲ್ಲಿಂದಲೂ ಬರುವುದು ಇಲ್ಲ, ಹೋಗುವುದು ಇಲ್ಲ. ರಾತ್ರಿ ಬಂದು ವಾಮದಪದವಿನಲ್ಲಿ ಸ್ಟೇ ಆಗಿದೆ. ಬೆಳಿಗ್ಗೆ ಹೋಗೋಣವೆಂದು ಬೇಗ ಹೊರಡಿದರೆ ಅದು ರಾತ್ರಿ ಬಂದೇ ಇಲ್ಲ ಎಂದು ಗೊತ್ತಾಗುವುದು ಬೆಳಿಗ್ಗೆಯೇ. ಅಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿ ಈ ಬಸ್ಸಿನದ್ದು. ಪ್ರಯಾಣಿಕರು ಜಗಳ ಕಾಯುವುದು ಚಾಲಕ, ನಿಯಂತ್ರಕರಲ್ಲಿ. ಪಾಪ ಅವರೇನು ಮಾಡಿಯಾರು? ಸಂಬಂಧ ಪಟ್ಟ. ಅಧಿಕಾರಿಗಳ ಚಳಿ ಬಿಡಬೇಕಲ್ಲವೇ?

ವಾಮದಪದವಿನ ಎಲ್ಲಾ ರೂಟುಗಳಿಗೂ ಕನಿಷ್ಟ ಒಂದೊಂದು ಬಸ್ಸಿನ ಸೌಲಭ್ಯ ಕಲ್ಪಿಸಬೇಕು. ಉಳಿದಂತೆ ವಾಮದಪದವು, ಕಾಡಬೆಟ್ಟು, ಬಿ.ಸಿ.ರೋಡು, ಮಂಗಳೂರು ಬಸ್ಸು ನಿತ್ಯ ವಾಮದಪದವಿನಿಂದ ಮಂಗಳೂರು ತನಕ ಹೋಗಿ ಮಂಗಳೂರಿನಿಂದಲೇ ಬಿಡಬೇಕು, ಯಾವುದೇ ಕಾರಣಕ್ಕೂ ಟ್ರಿಪ್ ಕಟ್ ಮಾಡಬಾರದು, ಮಾಡಿದರೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಈ ರಸ್ತೆಗೆ ಹೆಚ್ಚುವರಿ ಬಸ್ಸು ಸೌಲಭ್ಯ ಕಲ್ಪಿಸಬೇಕು.
ಈ ಬಗ್ಗೆ ಹಲವು ಬಾರಿ ಈ ಪರಿಸರದ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ, ಮನವಿ ಸಲ್ಲಿಸಿದ್ದಾರೆ. ಅದ್ಯಾವದೂ ವರ್ಕ್ ಔಟ್ ಆಗಿಲ್ಲ. ಇನ್ನುಳಿದಿರುವುದು ಇರುವ ಒಂದು ಬಸ್ಸನ್ನು ತಡೆದು ಪ್ರತಿಭಟನೆ. ಅದಕ್ಕಾಗಿ ಸಿದ್ಧರಾಗುತ್ತಿದ್ದಾರೆ ಪ್ರಯಾಣಿಕರು…..!!!