ಇನ್ನೊಬ್ಬರನ್ನು ಬೈಯ್ಯುತ್ತಲೇ ಅಸ್ಮಿತೆಯನ್ನು ಕಾಪಿಡುವಲ್ಲಿ ಪ್ರಭಾಕರ ಭಟ್ ಬಲು ನಿಸ್ಸಿಮರು…!!!

ಮಂಗಳೂರು: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹಿಜಾಬ್ ನಂತಹ ಸವಕಲು ಅಸ್ತ್ರಗಳೆಲ್ಲ ಮುನ್ನಲೆಗೆ ಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತಾಡಲು ಕಾಯುತ್ತಿದ್ದರೋ ಎಂಬಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಜಾಬ್ ಬಗ್ಗೆ ನಾಲಗೆ ಜಾರಿಬಿಟ್ಟದ್ದೆ ತಡ ಭಟ್, ಇಲ್ಲಿ ಸಲ್ಲದು ಎಂಬಂತೆ ಮಂಡ್ಯದಲ್ಲಿ ನಾಲಗೆ ಹರಿದೇ ಬಿಟ್ಟರು. ಯಾಕೆಂದರೆ ಅವರಿಗೆ ಯಾರಿಗಾದರೂ ಬೈಯ್ಯುತ್ತಿರಬೇಕು, ಅವರ ಮೊದಲ ಟಾರ್ಗೆಟ್ ಮುಸ್ಲಿಂ, ನಂತರ ಕ್ರಿಸ್ತಿಯನ್, ನಂತರ ಅವರಿಗೆ ಸಲ್ಲದವರು ಯಾರೂ ಆಗುತ್ತದೆ. ಒಟ್ಟಾರೆ ಇನ್ನೊಬ್ಬರಿಗೆ ಬೈಯ್ಯುತ್ತಲೇ ತನ್ನ ಅಸ್ಮಿತೆಯನ್ನು ಕಾಪಿಡುವಲ್ಲಿ ಪ್ರಭಾಕರ ಭಟ್ ಬಲು ನಿಸ್ಸೀಮರು.

ಒಟ್ಟಾರೆ ಬೆಂಕಿ ಹಚ್ಚಬೇಕು, ಅದಕ್ಕೊಂದು ಕಿಡಿಬೇಕು

ಹಿಜಾಬ್ ಬಗ್ಗೆ ಕಾನೂನಾತ್ಮಕವಾಗಿ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ ಎಂದಷ್ಟೇ ಮುಖ್ಯಮಂತ್ರಿ ಹೇಳಿದ್ದು. ಆದರೆ ಪ್ರತಿಯಾಗಿ ಭಟ್ಟರ ಹೇಳಿಕೆ ಆ ಮಟ್ಟದಲ್ಲ. ಅದು ಕಾನೂನು ಬಾಹಿರವಾದುದು. ಸಂವಿಧಾನ ವಿರೋಧಿಯಾದುದು, ಪ್ರಚೋಧನಾಕಾರಿಯಾದುದು, ಸೌಹಾರ್ದತೆಯ ನೆಲದಲ್ಲಿ ದ್ವೇಷದ ವಿಷಬೀಜ ಬಿತ್ತುವಂತದ್ದು. ಅದು ಬರೀಯ ಹೇಳಿಕೆಯಲ್ಲ, ವಿಷಪೂರಿತವಾದ, ದ್ವೇಷ ತುಂಬಿದ, ನಂಜಿನ ಜ್ವಾಲೆ. ಅವರ ಮಾತುಗಳನ್ನು ಇಲ್ಲಿ ಪುನರುಚ್ಚಿಸಲು ಬಯಸುವುದಿಲ್ಲ, ಯಾಕೆಂದರೆ ಅದು ಅವರ ನಾಲಿಗೆಗೆ ರುಚಿಯಾಗುವಂತದ್ದು. ಹಾಗೆಂದು ಅವರ ಮಾತುಗಳು ಅರ್ಥಾತ್ ಬೆಂಕಿಯ ಕಿಡಿಗಳು ಯಾರಿಗೂ/ ಅಥವಾ ಪ್ರಜ್ಞಾವಂತ, ಸುಸಂಸ್ಕ್ರತ ಹಿಂದುಗಳಿಗೂ ಹಿತವಾಗುವುದಿಲ್ಲ, ಇದರಿಂದ ಯಾರನ್ನೂ ಮೆಚ್ಚಿಸಲು ಆಗುವುದಿಲ್ಲ. ಆದರೆ ಮಾತಾಡುತ್ತಿರಬೇಕು, ಅದು ಕೆಲವೊಮ್ಮೆ ಚುನಾವಣೆಗೆ ಅಸ್ತ್ರವೂ ಆಗಬಹುದು. ಒಟ್ಟಾರೆ ಬೆಂಕಿ ಹಚ್ಚಬೇಕು. ಅದಕ್ಕೊಂದು ಕಿಡಿ ಬೇಕು ಅಷ್ಟೇ. ಅದಕ್ಕಾಗಿ ಏನೇನೋ ಮಾತಾಡುತ್ತಾರೆ,

ಬಡವರ ಮಕ್ಕಳು ಜೈಲಲ್ಲಿರುವಾಗ ಭಟ್ ಗೊರಕೆ ಹೊಡೆಯುತ್ತಾರೆ

ದು:ಖದ ಸಂಗತಿಯೆಂದರೆ ಇವರ ಮಾತನ್ನು ಕೇಳಿ ಬಡವರ ಮಕ್ಕಳು, ಹಿಂದುಳಿದವರು, ಶೂದ್ರರು, ಕೆಲಯುವಕರು ಬಿಸಿ ರಕ್ತದಿಂದ ಹಾರಾಡುತ್ತಾರೆ. ಜೈಲು ಪಾಲಾಗುತ್ತಾರೆ. ಭಟ್ ಆರಾಮವಾಗಿ ಗೊರಕೆ ಹೊಡೆಯುತ್ತಾರೆ. ಆದರೆ ಹಿಂದಿನ ಸ್ಥಿತಿ ಈಗ ಇಲ್ಲ. ಕೇಸು, ಜೈಲು ಅನುಭವಿಸಿ ನೊಂದು ಬೆಂದ ಬಹುತೇಕ ಹಿಂದೂ ಯುವಕರು ಈಗ ಒಂದಷ್ಟು ಜಾಗೃತಗೊಂಡಿದ್ದಾರೆ ಎನ್ನುವುದು ಸಮಾಧಾನದ ಸಂಗತಿ.

ಸಾಮೂಹಿಕವಾಗಿ ಎದುರಿಸುವ ಶಕ್ತಿ ಇಲ್ಲ

ಪ್ರಭಾಕರ ಭಟ್ಟರು ಈ ರೀತಿ ಮಾತಾಡುವುದು ಇದೇನೋ ಹೊಸತಲ್ಲ. ಅವರ ಹೇಳಿಕೆಯ ವಿರುದ್ಧ ಖಂಡನೆ, ಪ್ರತಿಭಟನೆ, ಹೋರಾಟ ನಡೆದದ್ದು ಒಂದೆರೆಡಲ್ಲ. ಆದರೆ ಏನೂ ಆಗಿಲ್ಲ. ಆಗಿಲ್ಲ ಎಂದರೆ ವಿರೋಧಿಗಳ ಒಂದಿಷ್ಟು ಹೊಂದಾಣಿಕೆಯ ರಾಜಕೀಯ, ಮತ್ತೊಂದಿಷ್ಟು ಮೃದುಹಿಂದುತ್ವದ ಧೋರಣೆ. ಜತೆಯಲ್ಲಿ ಇಡೀ ನಾಗರಿಕ ಸಮಾಜ ಸಂಘಟಿತರಾಗಿ ಭಟ್ ದ್ವೇಷ ಭಾಷಣವನ್ನು ಎದುರಿಸದೇ ಇರುವುದು ಭಟ್ ವಿರುದ್ಧದ ಆಂದೋಲನ ವಿಫಲತೆಗೆ ಕಾರಣ. ಅದ್ದರಿಂದ ಭಟ್ ಹಳೇ ಚಾಳಿಯನ್ನು ಹೊಸ ರೀತಿಯಲ್ಲಿ ಮುಂದುವರಿಸುತ್ತಲೇ ಇರುತ್ತಾರೆ ಕಾಲ ಮುಗಿಯುವ ತನಕವೂ.

ಸರಕಾರ ಏನು ಮಾಡುತ್ತದೆ?

ಇಷ್ಟೆಲ್ಲಾ ಮಾಡಿಸಿದ ಭಟ್ ವಿರುದ್ಧ ಈಗ ಬಿಜೆಪಿಯೇತರ ಸರಕಾರ ಇರುವಾಗಲಾದರೂ ಕ್ರಮ‌ ಜರುಗಿಸುತ್ತಾರೆಯೇ? ಆ ಧಮ್ಮು, ತಾಕತ್ತು ಯಾರಿಗಿದೆ? ಅದೇ ಬಿಜೆಪಿ ಸರಕಾರ ವಿರುವಾಗ ಸಣ್ಣಪುಟ್ಟ ವಿಷಯಗಳಿಗೂ ಜಾತ್ಯಾತೀತ ಸಿದ್ಧಾಂತದ ಸಾಮಾನ್ಯ ಕಾರ್ಯಕರ್ತರನ್ನು/ ಪತ್ರಕರ್ತರನ್ನು ಜೈಲಿಗಟ್ಟಿದ ಉದಾಹರಣೆಗಳೆಷ್ಟಿದೆ? ಜಾಮೀನು ಕೊಡುವವರಿಲ್ಲದೆ ಎಷ್ಟು ಮಂದಿ ಕಾರ್ಯಕರ್ತರು ಜೈಲಿನಲ್ಲಿ ಕೊಳೆದಿದ್ದಾರೆ. ಈಗ ಜಾತ್ಯಾತೀತ ಸಿದ್ಧಾಂತದ ಸರಕಾರವಿರುವಾಗ ಜಾತ್ಯಾತೀತರ ಬೇಡಿಕೆಗೆ ಮನ್ನಣೆ ಸಿಗುತ್ತದೆಯೇ??. ಜಾತೀವಾದಿ, ಮನುವಾದಿ, ಧರ್ಮವಾದಿಗಳನ್ನು ಮಟ್ಟ ಹಾಕಬಹುದೇ? ಕಾದು ನೋಡೋಣ.

ಅದು ಅವರ ಸಂಸ್ಕ್ರತಿ, ಹವ್ಯಾಸ

ಹಾಗೆಂದು ಈಗ ಭಟ್ಟರ ಹೇಳಿಕೆಯನ್ನು ಯಾರೂ ಅಷ್ಟೊಂದು ಸೀರಿಯಸ್ಸಾಗಿ ಪರಿಗಣಿಸುವುದಿಲ್ಲ. ಎಡಪಂಥಿಯ ಧೋರಣೆಯವರು ಒಂಚೂರು ಪ್ರತಿಕ್ರಿಸುತ್ತಾರೆ ಬಿಟ್ಟರೆ ಉಳಿದ ಯಾರೂ ಇಂತದ್ದೆಲ್ಲವನ್ನು ಕ್ಯಾರೇ ಎನ್ನುವುದಿಲ್ಲ. ವಿದ್ಯಾವಂತರು, ವಿಚಾರವಂತರು, ಬುದ್ದಿವಂತರಿಗೆ ಮಾಡಲು ಬೇರೆನೇ ಕೆಲಸವಿದೆ. ಇಂತಹ ಕೆಟ್ಟ ಭಾಷೆಯ ಮಾತುಗಳಿಗೆ ಪ್ರತಿಕ್ರಿಯಿಸಿದಷ್ಟು ಇದು ಬೆಳೆಯುತ್ತದೆ ಎನ್ನುವುದು ಭಟ್ ಗೂ ಗೊತ್ತಿದೆ. ನಮ್ಮ ನಾಡಿನ ವಿಚಾರವಂತರಿಗೂ ಗೊತ್ತಿದೆ. ಅದಕ್ಕಾಗಿ ಅದು ಅವರ ಹವ್ಯಾಸ, ಅಭ್ಯಾಸ, ಸಂಸ್ಕ್ರತಿ. ನಾವು ನಮ್ಮಷ್ಟಗೆ ಇದ್ದರೆ ಕ್ಷೇಮವೆಂದುಕೊಂಡರೆ ಯಾರಿಗೂ ನಷ್ಟವಿಲ್ಲ. ಯಾಕೆಂದರೆ ಪ್ರಭಾಕರ ಭಟ್ ಹೇಳಿಕೆಯನ್ನು ನಂಬಿ ಬೆಂಬಲಿಸಿ ಬೀದಿಗಿಳಿಯುವಷ್ಟು ದಡ್ಡ ಶಿರೋಮಣಿಗಳು ಯಾರೂ ಇಲ್ಲ. ಇನ್ನು ಅವರು ಮಾತಾಡಿದ ಬಿಸಿ ಏರುತ್ತಿರುವಾಗ ಒಂದಿಷ್ಟು ಕಾಂಗ್ರೇಸ್ ನವರು, ಮುಸ್ಲಿಮರು, ಕಮ್ಯುನಿಷ್ಟರು, ಡಿವೈಎಫ್ ಐ ಮತ್ತಿತರ ಸಮಾನ ಮನಸ್ಕ ಸಂಘಟನೆಗಳು ಕೆಲದಿನ ಮಾತಾಡುತ್ತಾರೆ, ಆಕ್ರೋಶ ವ್ಯಕ್ತಪಡಿಸುತ್ತಾರೆ, ಮತ್ತೆ ತಣ್ಣಗಾಗುತ್ತಾರೆ, ನಿದ್ದೆಗೆ ಜಾರುತ್ತಾರೆ ಭಟ್ ಇನ್ನೊಂದು ಹೇಳಿಕೆ ನೀಡುವ ತನಕ.

ನಾಗರಿಕ ಸಮಾಜ ಖಂಡಿಸಲೇಬೇಕಾದುದು

ಪ್ರಭಾಕರ ಭಟ್ ಮೊದಲು ಟಾರ್ಗೆಟ್ ಮಾಡುವುದೇ ಧರ್ಮವನ್ನು. ಟಾರ್ಗೆಟ್ ಗೊಳಗಾದ ಧರ್ಮದ ಪ್ರತಿನಿಧಿಗಳು ಮಾತಾಡುತ್ತಾರೋ? ಇಲ್ಲವೋ? ಯಾರಾದರೂ ಭಟ್ ವಿರುದ್ಧ ಹೇಳಿಕೆ ಕೊಟ್ಟರೆ ಹಿಂದು ನಾಯಕರೇ ಪ್ರತಿಕ್ರಿಯಿಸುವುದಿಲ್ಲ. ಭಟ್ ಭಾಷೆಯನ್ನೇ ಬಂಡವಾಳವಾಗಿಸಿಕೊಂಡ ಹಿಂದೂ ನಾಯಕರೆನಿಸಿಕೊಂಡ ಕೆಲವರು ಒಂದು ಸ್ಟೇಟ್ ಮೆಂಟ್ ಕೊಟ್ಟು ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಸುಮ್ಮನಾಗುತ್ತಾರೆ. ಈ ಸ್ಟೇಟ್ ಮೆಂಟೂ ಭಟ್ಟರಿಗೆ ಮುಟ್ಟುತ್ತದೋ ಇಲ್ಲವೋ ದೇವನೇ ಬಲ್ಲ.
ಇನ್ನು ಈ ಬಾರಿಯ ಭಟ್ ಹೇಳಿಕೆ, ಸಭ್ಯತೆ, ಘನತೆ, ಮರ್ಯಾದೆ ಎಲ್ಲವನ್ನೂ ಮೀರಿದ್ದು. ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ತಲೆತಲಾಂತರಿಂದ ಹಿಂದು, ಮುಸ್ಲಿಂ, ಕ್ರಿಸ್ತಿಯನ್ ರ ಸಹಿತ ಸರ್ವಧರ್ಮಿಯರು ಪರಸ್ಪರ ಪ್ರೀತಿ, ಅನೋನ್ಯತೆ, ಸೌಹಾರ್ಧತೆಯಿಂದ ಬದುಕಿಕೊಂಡು ಬರುತ್ತಿದ್ದೇವೆ. ಅದೆಷ್ಟೋ ಮುಸ್ಲಿಂ ರಾಷ್ಟ್ರಗಳಲ್ಲಿ ನಮ್ಮ ತುಳುವರು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಜಾಬ್ ಧರಿಸಿದರೆ ಕೇಸರಿ, ಅದು ಮಾಡಿದರೆ ಇದು….ಇದಕ್ಕೆ ಪ್ರತಿಯಾಗಿ ಅದು…ಪರ್ಮನೆಂಟ್ ಗಂಡ…ಹೀಗೆ ಭಟ್ ನಾಲಗೆ ತಿರುಗುತ್ತದೆ. ಪ್ರತಿಯೊಂದು ಧರ್ಮದಲ್ಲೂ ಅವರದ್ದೇ ಆದ ಸಂಸ್ಕ್ರತಿ, ಆಚರಣೆಗಳು ಇರುತ್ತದೆ. ಒಂದು ಧರ್ಮದಲ್ಲಿ ಇದ್ದ ಎಲ್ಲವನ್ನೂ ಮತ್ತೊಂದು ಧರ್ಮದವರು ಮಾಡಲು ಸಾಧ್ಯವೇ? ಇಂತಹ ಸಾಮಾನ್ಯ ಜ್ಞಾನವೂ ಭಟ್ ಗೆ ಇಲ್ಲದಾಯಿತೇ? ಈ ರೀತಿಯ ಕುಲಗೆಟ್ಟ ಮಾತುಗಳು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಸಮಗ್ರ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನ. ಇದನ್ನು ಇಡೀಯ ನಾಗರಿಕ ಸಮಾಜ ಒಕ್ಕೊರಲಿನಿಂದ ಖಂಡಿಸಲೇಬೇಕಾದುದು

ಗೋಪಾಲ ಅಂಚನ್
ಯುವಧ್ವನಿ‌ ನ್ಯೂಸ್ ಕರ್ನಾಟಕ
ಮೊ: 9449104318