ಹಿದಾಯ ಫೌಂಡೇಶನ್‌ನಿಂದ ದೇಶದ ಗೌರವ ಉಳಿಸುವ ಕೆಲಸ ನಡೆಯುತ್ತಿದೆ: ಲ. ಡಾ. ಮೆಲ್ವಿನ್ ಡಿಸೋಜ

ಬಂಟ್ವಾಳ, ಡಿ.31: ಸಾಮಾನ್ಯ ಮಕ್ಕಳು ಮತ್ತು ವಿಶೇಷ ಚೇತನ ಮಕ್ಕಳ ನಡುವೆ ಸಮಾನತೆ, ಸಮತೋಲನ ತರುವುದು ಸಮಾಜದ ಅತೀ ಮುಖ್ಯವಾದ ಕೆಲಸವಾಗಿದ್ದು, ಆ ನಿಟ್ಟಿನಲ್ಲಿ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲೆಯನ್ನು ಆರಂಭಿಸಿ ಹಲವಾರು ವಿಶೇಷ ಚೇತನ ಮಕ್ಕಳಿಗೆ ಆಸರೆಯಾಗಿರುವ ಹಿದಾಯ ಫೌಂಡೇಶನ್ ಮಂಗಳೂರು ದೇಶದ ಗೌರವವನ್ನು ಉಳಿಸುವ ಕೆಲಸ ಮಾಡುತ್ತಿದೆ ಎಂದು ಲಯನ್ಸ್ ಇಂಟರ್ ನ್ಯಾಶನಲ್ ಸಂಸ್ಥೆಯ 317 ಡಿ ಜಿಲ್ಲಾ ಗವರ್ನರ್ ಲ. ಡಾ. ಮೆಲ್ವಿನ್ ಡಿಸೋಜ ಹೇಳಿದರು.

ತಾಲೂಕಿನ ಗುರಿಮಜಲು ಕಾವಳಕಟ್ಟೆಯಲ್ಲಿರುವ ಹಿದಾಯ ಫೌಂಡೇಶನ್ ಶೇರ್ ಆಂಡ್ ಕೇರ್ ಕಾಲನಿಯ ಸಭಾಸಭವನದಲ್ಲಿ ನಡೆದ ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ವಾರ್ಷಿಕ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿಶೇಷ ಚೇತನ ಮಕ್ಕಳ ಪಾಲನೆಗೆ ಲಯನ್ಸ್ ಸಂಸ್ಥೆ ಇತ್ತೀಚೆಗೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳನ್ನು ಹಿದಾಯ ಫೌಂಡೇಶನ್ ಹಲವು ವರ್ಷಗಳ ಹಿಂದೆಯೇ ಆರಂಭಿಸಿ ಕಾರ್ಯರೂಪಕ್ಕೆ ತಂದು ಅದರಲ್ಲಿ ಯಶಸ್ವಿಯಾಗಿರುವುದು ನೋಡುವಾಗ ಸಂತಸವಾಗುತ್ತಿದೆ. ಮಹಿಳೆಯರು, ಮಕ್ಕಳ ಕಲ್ಯಾಣಕ್ಕೆ ಹತ್ತು ಹಲವು ಯೋಜನೆಗಳನ್ನು ರೂಪಿಸುವ ಹಿದಾಯ ಫೌಂಡೇಶನ್, ಅವುಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತರುತ್ತಿದೆ. ಮನುಷ್ಯರ ನಡುವೆ ಕರುಣೆ ಮತ್ತು ದಯಾಲು ಆಗುವ ಕೆಲಸ ಆದಾಗ ಸಮ ಸಮಾಜ ಕಟ್ಟುವ ಕೆಲಸ ಆಗುತ್ತದೆ. ಈ ಕೆಲಸ ಹಿದಾಯ ಫೌಂಡೇಶನ್‌ನಿಂದ ಬಹಳ ಸುಂದರವಾಗಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿದಾಯ ಫೌಂಡೇಶನ್ ಅಧ್ಯಕ್ಷ ಜಿ.ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ, ಕೇರಳ ಮತ್ತು ಕರ್ನಾಟಕದ ಹಲವು ವಿಶೇಷ ಚೇತನ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಅಧ್ಯಾಯನ ನಡೆಸಿ ಹಿದಾಯ ಫೌಂಡೇಶನ್ ಆಧೀನದಲ್ಲಿ ಈ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲೆಯನ್ನು ಆರಂಭಿಸಲಾಗಿದೆ. ಇದೊಂದು ಸವಾಲು ಮತ್ತು ಕಠಿಣವಾದ ಯೋಜನೆಯಾಗಿದೆ. ಈ ಶಾಲೆ ಮುಂದುವರಿಯಲು ಮತ್ತು ಬೆಳೆಯಲು ಇಲ್ಲಿನ ಶಿಕ್ಷಕರು, ಎಲ್ಲಾ ಸಿಬ್ಬಂದಿಯ ಪರಿಶ್ರಮ ಅಪಾರವಾಗಿದೆ. ಅವರೆಲ್ಲರಿಗೂ ಸಂಸ್ಥೆಯ ವತಿಯಿಂದ ನಾವು ಧನ್ಯವಾದ ತಿಳಿಸುತ್ತೇವೆ ಎಂದರು.

ಹಿದಾಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ಖಾಸಿಮ್ ಅಹ್ಮದ್, ಕತ್ತಾರ್ ಯುನಿಟ್ ಸದಸ್ಯ, ಉದ್ಯಮಿ ಅಬ್ದುಲ್ಲಾ ಮೋನು, ಉದ್ಯಮಿ ಅಕ್ಬರ್ ಅಲಿ ಜುಬೈಲ್, ಮಝರ್ ಜಿದ್ದಾ, ಹಿದಾಯ ಫೌಂಡೇಶನ್ ಪೂರ್ವಾಧ್ಯಕ್ಷ ಇಮ್ತಿಯಾಝ್, ಮುಸ್ತಫಾ ದಮಾಮ್, ಇಸ್ಮಾಯೀಲ್ ಸಿದ್ದೀಕ್ ಕಾವಳಕಟ್ಟೆ, ಉನ್ನತ್ತೀಕರಿಸಿದ ಉರ್ದು ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಖಲೀಲ್ ಅಹ್ಮದ್, ಹಿದಾಯ ಫೌಡೇಶನ್ ಕೋಶಾಧಿಕಾರಿ ಟಿ.ಕೆ.ಬಶೀರ್, ಹಿದಾಯ ಫೌಂಡೇಶನ್ ಉಪಾಧ್ಯಕ್ಷರಾದ ಮಕ್ಬೂಲ್ ಅಹ್ಮದ್, ಆಸೀಫ್ ಇಕ್ಬಾಲ್ ಫರಂಗಿಪೇಟೆ, ಆಡಳಿತಾಧಿಕಾರಿ ಆಬಿದ್ ಅಝ್ಗರ್, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸದಸ್ಯ ದೇವಪ್ಪ ಪೂಜಾರಿ, ಮುಹಮ್ಮದ್ ಕಲವಾರ್, ಶರೀಫ್ ದಮಾಮ್, ಶಾಹುಲ್ ಹಮೀದ್ ಸಹಿತ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಆಟೋಟ ಸ್ಪರ್ಧೆ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಆಶಾಲತಾ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಬಿ.ಮುಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸದಸ್ಯ ಅಬ್ದುಲ್ ಹಕೀಮ್ ಕಲಾಯಿ ಧನ್ಯವಾದಗೈದರು.