ವಾಮದಪದವಿನಲ್ಲಿ ಶೌಚಾಲಯದ ನೀರು ಪರಿಸರಕ್ಕೆ-ಸ್ಥಳೀಯ ಮನೆಗಳು ಸಂಕಷ್ಟದಲ್ಲಿ-ದೂರು ನೀಡಿದರೂ ಕೇಳುವವರಿಲ್ಲ

ಬಂಟ್ವಾಳ: ತಾಲೂಕಿನ ಪ್ರಮುಖ ಪೇಟೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ವಾಮದಪದವು ಪೇಟೆ ಈಗ ಪರಿಸರ ಮಾಲಿನ್ಯಕ್ಕೆ ತುತ್ತಾಗುತ್ತಿದೆ.

ವಾಮದಪದವು ಸರ್ಕಲ್ ಸಮೀಪ ಉದ್ಯಮಿಯೊಬ್ಬರು ನಿರ್ಮಿಸಿದ ವಸತಿ ಸಮುಚ್ಚಯದ ಶೌಚಾಲಯದ ಕೊಳಚೆ ನೀರು ನಿರ್ವಹಣೆಯ ಲೋಪದಿಂದಾಗಿ ಪರಿಸರದಲ್ಲೆಡೆ ಹರಿಯುತ್ತಿದ್ದು ಪರಿಸರ ದುರ್ನಾತ ಬೀರುತ್ತಿದೆ.

ಶೌಚಾಲಯದ ಮಲ, ಮೂತ್ರ ಸಹಿತ ನೀರು ಪರಿಸರಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಪರಿಸರ ಸಂಪೂರ್ಣ ಮಾಲಿನ್ಯಗೊಂಡಿದ್ದು ಸ್ಳಳೀಯರ ತೋಟಗಳಿಗೂ ನುಗ್ಗಿ ಗಿಡಗಳು ಹಾನಿಗೊಳಗಾಗಿದೆ. ಖಾಸಗಿ ಬಾವಿಯ ನೀರು ವಾಸನೆಯುಕ್ತವಾಗಿದೆ.

ವಾಮದಪದವು ಪೇಟೆ ದಿನೇ ದಿನೇ ಬೆಳೆಯುತ್ತಿದ್ದು ಸಾಕಷ್ಟು ಅಂಗಡಿ-ಮುಗ್ಗಟ್ಟುಗಳು, ಬ್ಯಾಂಕುಗಳು, ಅಸ್ಪತ್ರೆಗಳು, ವಿದ್ಯಾರ್ಥಿ ನಿಲಯಗಳು, ಸರಕಾರಿ ಕಚೇರಿಗಳ ಸಹಿತ ಅಂಗನವಾಡಿಯಿಂದ ಪದವಿ ಶಿಕ್ಷಣದವರೆಗೆ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ.

ವಾಮದಪದವು ಮುಖ್ಯರಸ್ತೆಯ ಸನಿಹದಲ್ಲೇ ಈ ಖಾಸಗಿ ವಸತಿ ಸಮುಚ್ಚಯವಿದ್ದು ಇದರ ಶೌಚಾಲಯದ ನೀರು ಪರಿಸರದೆಲ್ಲೆಡೆ ಹರಿಯುತ್ತಿರುವುದರಿಂದ ಸ್ಥಳೀಯವಾಸಿಗಳಿಗೆ ಸಂಕಷ್ಟ ಎದುರಾಗಿದೆ.

ಈ ಬಗ್ಗೆ ಸ್ಥಳೀಯರು ಹಲವು ಬಾರಿ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದೀಗ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ್ ವಾಮದಪದವು ಅವರು
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಪರಿಸರ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

———-++++++–
ಗೋಪಾಲ ಅಂಚನ್
ಯುವಧ್ವನಿ ನ್ಯೂಸ್ ಕರ್ನಾಟಕ