ಎರಡು ಇಡ್ಲಿ, ಒಂದು ಮೊಟ್ಟೆಗೆ ಬರೊಬ್ಬರಿ 35 ರೂಪಾಯಿ, ಇದು ಬಂಟ್ವಾಳ ಪುರಸಭೆಯಲ್ಲಿ ಪೌರಕಾರ್ಮಿಕರಿಗೆ ನೀಡುವ ತಿಂಡಿಯ ಬಜೆಟ್…!!!

ಬಂಟ್ವಾಳ: ಇಲ್ಲಿನ ಪುರಸಭೆಯಲ್ಲಿ ಸುಮಾರು 40 ಜನ ಪೌರಕಾರ್ಮಿಕರಿದ್ದಾರೆ. ಇವರಿಗೆ ಎಲ್ಲಾ ಕಡೆ ಇರುವಂತೆ ಇಲ್ಲಿಯೂ ತಿಂಡಿಯ ವ್ಯವಸ್ಥೆ ಇದೆ. ಎರಡು ಚಟ್ಟೆಯಾಕಾರದ ಇಡ್ಲಿಯೊಂದಿಗೆ ಒಂದು ಮೊಟ್ಟೆ ನೀಡಲಾಗುತ್ತದೆ. ಆದರೆ ಒಬ್ಬರಿಗೆ ಬಜೆಟ್ 35 ರೂಪಾಯಿ..!!

35 ರೂಪಾಯಿಯನ್ನು ಕೆಲವು ಮಹಾನಗರ ಪಾಲಿಕೆಯಲ್ಲಿ 50 ಕ್ಕೆ ಏರಿಸಲಾಗಿದೆ. ಅಲ್ಲಿ 50 ರೂಪಾಯಿ ಮೌಲ್ಯದ ವೈವಿಧ್ಯಮಯ ತಿಂಡಿಗಳನ್ನು ನೀಡಲಾಗುತ್ತಿದೆ. ಆದರೆ ಇಲ್ಲಿ ಇನ್ನೂ 35 ರೂಪಾಯಿಯೇ ಇದೆ. ಇರಲಿ, ಹಾಗೆಂದು 35 ರೂಪಾಯಿ ಮೌಲ್ಯದ ಆಹಾರವನ್ನು ಕೊಡುತ್ತಾರೋ ಅಂದರೆ ಅದೂ ಇಲ್ಲ. ಎರಡು ಚಿಕ್ಕದಾದ ಇಡ್ಲಿ, ಒಂದು ಮೊಟ್ಟೆಗೆ ( ಅದೂ ಚಹಾ ಇಲ್ಲ) ಹೆಚ್ಚೆಂದರೆ 20 ರೂಪಾಯಿ ಆಗಬಹುದೇನೋ? ಹಾಗಾದರೆ ಒಬ್ಬರಲ್ಲಿ ಉಳಿಕೆಯಾದ 15 ರೂಪಾಯಿಯಂತೆ 40 ಜನರ ಉಳಿಕೆಯ ಹಣ ಯಾರ ಜೇಬಿಗೆ ಹೋಗುತ್ತದೆ ಎಂದು ಪ್ರಶ್ನಿಸುತ್ತಾರೆ ಕೆಲ ಕಾರ್ಮಿಕರು.

ಅದೂ ಆಹಾರ ಪರಿಶುದ್ಧವಾಗಿಲ್ಲ, ಗುಣಮಟ್ಟವೂ ಚೆನ್ನಾಗಿಲ್ಲ, ದುಡ್ಡಿನಷ್ಟು ಮೌಲ್ಯದ ಆಹಾರ ಸಿಗುತ್ತಿಲ್ಲ ಎಂದು ದೂರುವ ಕಾರ್ಮಿಕರು ಈ ಬಗ್ಗೆ ಸಂಬಂಧಪಟ್ಟ ಪುರಸಭಾಧಿಕಾರಿಯವರ ಗಮನಕ್ಕೆ ತಂದರೂ ಅವರು ಕ್ಯಾರೇ ಎನ್ನಲಿಲ್ಲ. ಹೇಗಿದ್ದರೂ ಪೌರಕಾರ್ಮಿಕರೆಂದರೆ ಮುಖ್ಯಾಧಿಕಾರಿಯವರಿಗೆ ಅಷ್ಟಕಷ್ಟೇ. ಅಸ್ಪ್ರಶ್ಯತೆ, ಮಡಿಮಲಿಗೆಯ ನಂಟು ಅವರನ್ನು ಒಂದಷ್ಟು ಅಂಟಿಕೊಂಡಿದೆ ಎಂಬ ಬಲವಾದ ಆರೋಪ ಪುರಸಭಾ ವಲಯದಲ್ಲೇ ಕೇಳಿ ಬರುತ್ತಿದೆ.

ಪೌರಕಾರ್ಮಿಕರಿಗೆ ಆಹಾರ ವಿತರಣೆಗೆಂದು ಟೆಂಡರ್ ಕರೆದಿಲ್ಲ ಎನ್ನಲಾಗುತ್ತಿದೆ. ತಾತ್ಕಾಲಿಕವಾಗಿ ಒಬ್ಬರಿಗೆ ವಹಿಸಿಕೊಡಲಾಗಿದೆ. 35 ಕ್ಕಿಂತ ಕಡಿಮೆಗೆ ಅವರು “ಪೊರೆಸುವುದಿಲ್ಲ” ಎನ್ನುತ್ತಾರೆ ಎಂಬ ಸಬೂಬು ಹೇಳಲಾಗುತ್ತಿದೆ. “ಪೊರೆಸದಿದ್ದರೆ” “ಪೊರೆಸುವವರಿಗೆ” ಕೊಡಬಹುದಲ್ವೇ ಎನ್ನುವುದು ಪ್ರಶ್ನೆ. ಅಂತೂ 35 ರೂಪಾಯಿ ಫಿಕ್ಸ್ ಆದ ಮೇಲೆ ಅಷ್ಟೇ ಮೌಲ್ಯದ ಆಹಾರ ವಿತರಣೆಯ ಬದಲು ಕಿಂಚಿತ್ತು ಕೊಡುವುದು ಪೌರಕಾರ್ಮಿಕರಿಗೆ ಮಾಡುವ ಅನ್ಯಾಯವಲ್ಲವೇ?.

ಬಂಟ್ವಾಳ ಪುರಸಭೆಯಲ್ಲಿ ಆಹಾರ ವಿತರಣೆಯಲ್ಲಿ ಆಗುವ ಅನ್ಯಾಯದ ಬಗ್ಗೆ ದ.ಕ.ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ಪರಿಶಿಷ್ಟ ಜಾತಿ-ಪಂಗಡಗಳ ಕುಂದು ಕೊರತೆ ನಿವಾರಣಾ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ಪೌರಕಾರ್ಮಿಕರ ಸಂಘದ ದ.ಕ.ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಕಂಕನಾಡಿ ತಿಳಿಸಿದ್ದಾರೆ.
——-+++++———-++++++++
ಗೋಪಾಲ ಅಂಚನ್
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ: 9449104318