ಬಿ.ಸಿ.ರೋಡಿನ ಪುರಸಭಾ ವಾಣಿಜ್ಯ ಸಂಕೀರ್ಣಕ್ಕೆ ಪರವಾನಿಗೆಯೇ ಇಲ್ಲ…..!!!

ಬಂಟ್ವಾಳ ಪುರಸಭೆಯವರು ಕೆಲವರ್ಷದ ಹಿಂದೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ಸನಿಹದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀಣ ಕಟ್ಟಡವೊಂದಕ್ಕೆ ಪರವಾನಿಗೆಯೇ ಇಲ್ಲದಿರುವ ಅಂಶವೊಂದು ಬಯಲಾಗಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ಆಕ್ರಮ ಕಟ್ಟಡದ ಬಗ್ಗೆ ವಿಶ್ವನಾಥ ಗೌಡ ಮಣಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಸಂಬಂಧಪಟ್ಟ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪುರಸಭಾ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಈ ಅಕ್ರಮ ವಾಣಿಜ್ಯ ಸಂಕೀರ್ಣದಲ್ಲಿ ಕೆಲವು ಅಂಗಡಿ-ಮುಗ್ಗಟ್ಟುಗಳಿದ್ದು ಮೇಲಂತಸ್ತಿನಲ್ಲಿ ಬುಡಾ ಕಾರ್ಯಾಲಯ ಜತೆಗೆ ಪ್ರೆಸ್ ಕ್ಲಬ್ ಕೂಡ ಕಾರ್ಯಾಚರಿಸುತ್ತಿರುವುದು ದುರಂತವೆಂದು ಹೇಳಲಾಗುತ್ತಿದೆ.

ಪುರಸಭೆಗೆ ಆದಾಯ ಕ್ರೋಡಿಕರಣದ ದೃಷ್ಠಿಯಿಂದ ನಿರ್ಮಿಸಲಾಗಿರುವ ಈ ವಾಣಿಜ್ಯ ಸಂಕೀರ್ಣಕ್ಕೆ ಕಟ್ಟಡಕ್ಕೆ ಪರವಾನಿಗೆಯೇ ಇಲ್ಲ. ಜತೆಯಲ್ಲಿ ಮೇಲಂತಸ್ತಿನ ನಿರ್ಮಾಣದ ಬಗ್ಗೆ ಅನುದಾನದ ಮೂಲಸಹಿತ ಯಾವುದೇ ದಾಖಲೆಗಳಿಲ್ಲ. ಮೇಲಂತಸ್ತಿನ ಕೊಠಡಿಗಳನ್ನು ಟೆಂಡರ್ ಕರೆದು ಬಾಡಿಗೆಗೆ ನೀಡುವಂತೆ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಇವೆಲ್ಲವನ್ನೂ ದಿಕ್ಕರಿಸಿ ಇಲ್ಲಿಯ ಕೊಠಡಿಗಳನ್ನು ನೀಡಲಾಗಿದೆ. ವಿಶೇಷವೆಂದರೆ ಬುಡಾದ ಸರಕಾರಿ ಕಚೇರಿ ಸಹಿತ ವ್ಯವಸ್ಥೆಯನ್ನು ಪ್ರಶ್ನಿಸಬೇಕಾದ ಪತ್ರಕರ್ತರೇ ಈ ಅಕ್ರಮ ಕಟ್ಟಡದಲ್ಲಿ ನೆಲೆಯೂರಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿದೆ.

ಬಂಟ್ವಾಳ ಶಾಸಕರ ಕಾರ್ಯಾಲಯ, ತಾಲೂಕು ಪಂಚಾಯತು ಕಚೇರಿ ಮತ್ತು ತಾಲೂಕಾಡಳಿತ ಸೌಧದ ಸಮೀಪದಲ್ಲೇ ಈ ಪರವಾನಿಗೆ ರಹಿತ ಕಟ್ಟಡವಿದ್ದರೂ ಸಂಬಂಧಪಟ್ಟವರು ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿಶ್ವನಾಥ ಗೌಡ ಅವರು ಕಟ್ಟಡಕ್ಕೆ ಸಂಬಂಧಪಟ್ಟ ದಾಖಲೆಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದ ಬಹುತೇಕ ಪ್ರಶ್ನೆಗಳಿಗೆ ಪುರಸಭೆಯವರು ಇಲ್ಲ, ಇಲ್ಲ ಎಂದು ಉತ್ತರಿಸಿದ್ದಾರೆಯೇ ಹೊರತು ಮುಂದೇನು ಎಂಬುದರ ಬಗ್ಗೆ ಪುರಸಭಾಡಳಿತ ಗಾಢ ಮೌನ ವಹಿಸಿದೆ.

ಪರವಾನಿಗೆಯೇ ಇಲ್ಲದ ಈ ಕಟ್ಟಡಲ್ಲಿ ಬಹುತೇಕ ಅಂಗಡಿ-ಮುಗ್ಗಟ್ಟುಗಳಿದೆ. ಕಚೇರಿಗಳಿದೆ. ಆದರೆ ಯಾವುದೇ ಕ್ಷಣದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.

ಪರವಾನಿಗೆ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕೊಡುವಂತಿಲ್ಲ. ಆದರೆ ಇಲ್ಲಿ ಈ ನಿಯಮವನ್ನೂ ದಿಕ್ಕರಿಸಲಾಗಿದೆ. ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನೂ ನೀಡಿ ಅಧೀಕೃತ ಕಟ್ಟಡವೆಂದು ಕಟ್ಟಡದಲ್ಲಿರುವ ಬಾಡಿಗೆದಾರರನ್ನು ನಂಬಿಸಲಾಗಿದೆ. ಇದೀಗ ಪರವಾನಿಗೆ ಇಲ್ಲದಿರುವ ಅಂಶ ಮತ್ತು ಮೇಲಂತಸ್ತಿನ ಕಟ್ಟಡದ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಟ್ಟಡದಲ್ಲಿರುವವರು ಜಾಗೃತಗೊಂಡು ಪುರಸಭೆಯವರನ್ನು ಪ್ರಶ್ನಿಸತೊಡಗಿದ್ದಾರೆ. ಬಂಟ್ವಾಳ ತಾಲೂಕಿನ ಹೃದಯಭಾಗ ಬಿ.ಸಿ.ರೋಡಿನಲ್ಲಿ ಈ ರೀತಿ ಕಟ್ಟಡ ಪರವಾನಿಗೆಯೇ ಇಲ್ಲದೆ ವಾಣಿಜ್ಯ ಸಂಕೀರ್ಣವೊಂದು ಕಾರ್ಯಾಚರಿಸುತ್ತಿರುವುದು ಹಾಗೂ ಮೇಲಂತಸ್ತಿನ ಕಟ್ಟಡದ ಬಗ್ಗೆ ಯಾವುದೇ ಅಧೀಕೃತ ದಾಖಲೆಗಳಿಲ್ಲದಿರುವುದು ಹಲವು ಸಂದೇಹಗಳನ್ನು ಸೃಷ್ಠಿಸಿದೆ. ಈ ಬಗ್ಗೆ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ. ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

✍????ಗೋಪಾಲ ಅಂಚನ್
ಯುವಧ್ವನಿ.ಕಾಂ
9449104318