ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ತುಳುನಾಡಿನ ಸಂಪ್ರದಾಯದಂತೆ ಸಾಮೂಹಿಕ ವಿವಾಹ ನಿಶ್ಚಿತಾರ್ಥ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ ಆಶ್ರಯದಲ್ಲಿ, ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರಾ ನೇತೃತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಎ.೩೦ರಂದು ನಡೆಯಲಿರುವ ೧೫ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ಸಾಮೂಹಿಕ ನಿಶ್ಚಿತಾರ್ಥ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆಮೈದಾನದಲ್ಲಿ ನಡೆಯಿತು.


ಯಶೋಧರ ಶೆಟ್ಟಿ ದಂಡೆ ಮತ್ತು ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟುಗುತ್ತು ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ , ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಪರಸ್ಪರ ಬದಲಾಯಿಸಿಕೊಂಡರು.
9 ಜೋಡಿ ವಧು, ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. ವಧು-ವರರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ರಾಘವೇಂದ್ರ ಪ್ರತಿಷ್ಠಾನದ ಕೋಶಾಧಿಕಾರಿ ವಸಂತ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.
ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ. ಆರ್ಥಿಕ ಹಿಂದುಳಿದವರ ಬದುಕಿಗೆ ಶಕ್ತಿ ತುಂಬುವ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.


ಮುತ್ತೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ಅರ್ಚಕ ಹರಿಯಪ್ಪ ಮಾತನಾಡಿ ಭಾರತೀಯ ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿಯಾಗಿದೆ. ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆಯಾಗಿದೆ ಎಂದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮೇಲ್ವಿಚಾರಕಿ ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಆರ್ಥಿಕವಾಗಿ ಹಿಂದುಳಿದವರು ಅದ್ಧೂರಿಯ ವಿವಾಹ ನಡೆಸಲು ಅಸಾಧ್ಯವಾದ ಕಾರಣ ಸಾಮೂಹಿಕ ವಿವಾಹದ ಮೂಲಕ ವಿಜೃಂಭಣೆಯಲ್ಲಿ, ಅರ್ಥಪೂರ್ಣವಾಗಿ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಉದ್ಯಮಿ ನಾಗೇಶ್ ಪ್ರಭು ಮೂರ್ಜೆ ಮಂಗಳ ವಸ್ತ್ರ ವಿತರಿಸಿದರು.
ಶ್ರೀ ರಾಮಾಂಜನೇಯ ಭಜನ ಮಂದಿರದ ಅಧ್ಯಕ್ಷ ಶ್ರೀನಿವಾಸ ಅತ್ತಾಜೆ, ಗ್ರಾ.ಪಂ. ಸದಸ್ಯ ಕಾಂತಪ್ಪ ಕರ್ಕೇರ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ಅಂದ್ರಳಿಕೆ, ಗಣೇಶ ಮೂಲ್ಯ ಅನಿಲಡೆ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಬಂಗೇರ ಪುಳಿಮಜಲು, ಮಾಜಿ ಅಧ್ಯಕ್ಷರಾದ ಮಾಧವ ಬಂಗೇರ, ರತ್ನಾಕರ ಪಿ.ಎಂ., ಕ್ರೀಡಾ ಸಂಚಾಲಕ ಅಬ್ದುಲ್ ಹಮೀದ್ ಮೊದಲಾದವರರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಪಿ.ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318