ಎಪ್ರಿಲ್ 20ರಂದು ನಾಮಪತ್ರ ಸಲ್ಲಿಸುತ್ತೇನೆ, ಕ್ಷೇತ್ರದ ಜನತೆಯ ಆಶೀರ್ವಾದ ಇರಲಿ-ರಮಾನಾಥ ರೈ

ಬಂಟ್ವಾಳ: ಬಂಟ್ವಾಳ ವಿದಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಎಪ್ರಿಲ್ 20ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ಸಂದರ್ಭ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಕ್ಷೇತ್ರದ ಜನತೆ ಅಪಾರ ಸಂಖ್ಯೆಯಲ್ಲಿ ನನ್ನೊಂದಿಗಿದ್ದು ನನ್ನನ್ನು ಆಶೀರ್ವದಿಸಬೇಕು ಎಂದು ಬಿ.ರಮಾನಾಥ ರೈ ಮನವಿ ಮಾಡಿದ್ದಾರೆ.


ಬಿ.ಸಿ.ರೋಡಿನ ಪಕ್ಷದ ಚುನಾವಣಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 9ಗಂಟೆಗೆ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಪಾದಯಾತ್ರೆಯಲ್ಲಿ ಬಂದು ಅಪರಾಹ್ನ 12.35ಕ್ಕೆ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

9ನೇ ಬಾರಿಗೆ ಅವಕಾಶ:

ಕಾಂಗ್ರೇಸ್ ಪಕ್ಷದಿಂದ 9ನೇ ಬಾರಿಗೆ ಸ್ಪರ್ಧಿಸಲು ಪಕ್ಷ ನನಗೆ ಅವಕಾಶ ನೀಡಿರುವುದು ಸಂತಸ ತಂದಿದೆ. ಅನೇಕ ವರ್ಷಗಳ ಕಾಲ ಶಾಸಕನಾಗಿ, ಸಚಿವನಾಗಿ ಬಂಟ್ವಾಳ ಕ್ಷೇತ್ರದ ಜನತೆಯ ಸೇವೆ ಮಾಡುವ ಅವಕಾಶ ನನಗೆ ದೊರೆತಿದೆ. ಕಳೆದ ಬಾರಿ ಸಾಕಷ್ಟು ಅಭಿವೃದ್ದಿ ನಡೆಸಿದ್ದರೂ ವಿರೋಧ ಪಕ್ಷದವರ ವ್ಯಾಪಕ ಅಪಪ್ರಚಾರದಿಂದ ನನಗೆ ಸೋಲಾಗಿದೆ. ಸೋಲಿನಿಂದ ನಾನು ಬೇಸರಗೊಂಡಿಲ್ಲ, ಆದರೆ ನನ್ನನ್ನು ಸೋಲಿಸಿದ ರೀತಿಯ ಬಗ್ಗೆ ನನಗೆ ನೋವಿದೆ. ಇದೀಗ ಮತ್ತೆ ಜನತೆಯ ಸೇವೆ ಸಲ್ಲಿಸುವ ಅವಕಾಶ ನನ್ನ ಮುಂದಿದ್ದು ಈ ಬಾರಿ ಕ್ಷೇತ್ರದ ಜನತೆ ಸತ್ಯಾಂಶವನ್ನು ಅರಿತು ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ರಮಾನಾಥ ರೈ ಹೇಳಿದರು.

ಬಿ.ಸಿ.ರೋಡು ನಗರದ ಸಮಗ್ರ ಅಭಿವೃದ್ಧಿ:

ಎರಡು ಬಾರಿ ಮಾತ್ರ ಬಿ.ಸಿ.ರೋಡು ನಗರ ನನ್ನ ಕ್ಷೇತ್ರದ ವ್ಯಾಪ್ತಿಗೆ ಬಂದಿತ್ತು. ಆ ಸಂದರ್ಭದಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇನೆ. ಬಿ.ಸಿ.ರೋಡು ನಗರದಲ್ಲಿ ನಿಂತು ನೋಡಿದರೆ ಕಾಣುವ ಬಹುತೇಕ ಶಾಶ್ವತ ಯೋಜನೆಗಳ ಸಹಿತ ರಸ್ತೆ ಕಾಮಗಾರಿಗಳು ನನ್ನ ಅಧಿಕಾರಾವಧಿಯಲ್ಲಿ ನಡೆದಿದೆ. ಇನ್ನು ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಹಲವಾರು ಜನಪರ ಶಾಶ್ವತ ಯೋಜನೆಗಳನ್ನು ಮಂಜೂರುಗೊಳಿಸಲಾಗಿತ್ತು. ಆದರೆ ಕಳೆದ ಆಡಳಿತಾವಧಿಯಲ್ಲಿ ಅವೆಲ್ಲವೂ ನೆನೆಗುದಿಗೆ ಬಿದ್ದಿದೆ. ನಾನು ಶಾಸಕನಾಗಿ ಆಯ್ಕೆಯಾದರೆ ನೆನೆಗುದಿಗೆ ಬಿದ್ದ ಎಲ್ಲಾ ಯೋಜನೆಗಳಿಗೆ ಮರುಜೀವ ತುಂಬುತ್ತೇನೆ ಎಂದು ರೈ ಹೇಳಿದರು.

ನಾನು ಚುನಾವಣೆಗಾಗಿ ಕ್ಷೇತ್ರಕ್ಕೆ ಬಂದವನಲ್ಲ:

ನಾನು ಚುನಾವಣೆಗಾಗಿ ಬೇರೆ ಕ್ಷೇತ್ರದಿಂದ ಬಂದವನಲ್ಲ. ನಾನು ಬಂಟ್ವಾಳ ಕ್ಷೇತ್ರದ ಮತದಾರ. ಬಂಟ್ವಾಳವೇ ನನ್ನ ಸಾಮಾಜಿಕ ಬದುಕಿನ ನೆಲೆ. ಬಂಟ್ವಾಳದಲ್ಲಿ ಕೃಷಿ ಮತ್ತು ಗ್ರಾಮಾಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷನಾಗಿ ಅದರ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದ್ದಲ್ಲದೆ ಬಂಟ್ವಾಳದಲ್ಲೇ ಸಾಮಾಜಿಕ, ರಾಜಕೀಯ, ಸಹಕಾರಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದವನು. ಆರಂಭದಲ್ಲಿ ಬಂಟ್ವಾಳದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷನಾಗಿ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷನಾಗಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷನಾಗಿ, ಕೆಪಿಸಿಸಿ ಉಪಾಧ್ಯಕ್ಷನಾಗಿ ಹಂತ ಹಂತವಾಗಿ ಬೆಳೆದವನು. ಅಧಿಕಾರವಿದ್ದರೂ ಇಲ್ಲದಿದ್ದರೂ ಬಂಟ್ವಾಳದ ಜನತೆಯ ಕಷ್ಟಸುಖಗಳಲ್ಲಿ ನಿರಂತರ ಜತೆಗಿದ್ದವನು. ಅದ್ದರಿಂದ ಕ್ಷೇತ್ರದ ಜನತೆ ನನ್ನನ್ನು ಅರ್ಥಮಾಡಿಕೊಂಡಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ರೈ ಹೇಳಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪಿಯೂಸ್ ಎಲ್.ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಸಂಜೀವ ಪೂಜಾರಿ ಬೊಳ್ಳಾಯಿ, ಜನಾರ್ಧನ ಚೆಂಡ್ತಿಮಾರು, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಉಮೇಶ್ ಬೋಳಂತೂರು, ಅಬ್ಬಾಸ್ ಅಲಿ, ಮಹಮ್ಮದ್ ಷರೀಫ್, ಜಯಂತಿ.ವಿ.ಪೂಜಾರಿ, ಸುರೇಶ್ ಕುಲಾಲ್ ನಾವೂರು, ನಾರಾಯಣ ನಾಯ್ಕ್, ವಾಸು ಪೂಜಾರಿ ಲೊರೆಟ್ಟೊ, ಸಿದ್ದಿಕ್ ಗುಡ್ಡೆಯಂಗಡಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯುಸ್ ಕರ್ನಾಟಕ
ಮೊ:9449104318