ಏ.೧೫ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆಯ ಮೂಲಕ ಬಂದು ನಾಮಪತ್ರ ಸಲ್ಲಿಕೆ-ರಾಜೇಶ್ ನಾಯ್ಕ್

ಬಂಟ್ವಾಳ: ಏ.೧೫ರಂದು ಬೆಳಿಗ್ಗೆ ೮ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ೮.೩೦ರಿಂದ ಸಾವಿರಾರು ಕಾರ‍್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಪಾದಯಾತ್ರೆಯ ಮೂಲಕ ಬಿ.ಸಿ.ರೋಡಿಗೆ ಬಂದು ಅಪರಾಹ್ನ ೧೨.೧೫ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.


ಬಿ.ಸಿ.ರೋಡಿನಲ್ಲಿ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಬಿಜೆಪಿ ಕಾರ‍್ಯಕರ್ತರ ಹಾಗೂ ಹಿತೈಷಿಗಳ ಪ್ರತಿನಿಧಿಯಾಗಿ ನಾಮಪತ್ರ ಸಲ್ಲಿಸುವ ಈ ಸಂದರ್ಭದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನೈತಿಕ ಬೆಂಬಲ ನೀಡುವಂತೆ ವಿನಂತಿಸಿದರು.
೨೦೧೮ರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾದೆ. ನಂತರದ ದಿನಗಳಲ್ಲಿ ಬಹಳಷ್ಟು ಅಭಿವೃದ್ಧಿ ಕಾರ‍್ಯಗಳ ಜತೆಯಲ್ಲಿ ಶಾಂತಿಯುತವಾದ ನವ ಬಂಟ್ವಾಳ ಕಟ್ಟಲು ಸಾಧ್ಯವಾದ ಬಗ್ಗೆ ನನಗೆ ಆತ್ಮತೃಪ್ತಿ ಇದೆ. ಇದೀಗ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯ ವರಿಷ್ಠರು ಅವಕಾಶ ನೀಡಿರುವುದು ನನಗೆ ಸಂತಸ ತಂದಿದೆ. ಅವಕಾಶ ನೀಡಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದೀಯ ಮಂಡಳಿಯ ಪ್ರಮುಖರಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಪಕ್ಷದ ರಾಷ್ಟ್ರ, ರಾಜ್ಯ ಪ್ರಮುಖರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ ರಾಜೇಶ್ ನಾಯ್ಕ್, ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳೊಂದಿಗೆ ಬಂಟ್ವಾಳ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಯೋಜನೆಗಳನ್ನು ಜನತೆ ಗುರುತಿಸಿ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಅಭಿವೃದ್ಧಿ ಮುಂದಿಟ್ಟು ಚುನಾವಣೆ:

ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಕಳೆದ ಐದು ವರ್ಷದಲ್ಲಿ ರಾಜೇಶ್ ನಾಯ್ಕ್ ಅವರು ಶಾಸಕರಾಗಿ ನಡೆಸಿದ ಅಪಾರ ಪ್ರಮಾಣದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟು ನಾವು ಚುನಾವಣೆಯನ್ನು ಎದುರಿಸುತ್ತೇವೆ. ಈಗಾಗಲೇ ಕ್ಷೇತ್ರಾದ್ಯಂತ ಸಂಚರಿಸಿದ್ದು ಕಾರ‍್ಯಕರ್ತರು ಚುನಾವಣೆಗೆ ಸನ್ನದ್ಧರಾಗಿದ್ದಾರೆ. ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಬೇಕೆನ್ನುವುದು ನಮ್ಮ ಯೋಚನೆಯಾಗಿದೆ, ಅದಕ್ಕಾಗಿ ಸರ್ವ ಸಿದ್ಧತೆ ನಡೆಯುತ್ತಿದೆ ಎಂದರು.
ಕ್ಷೇತ್ರದ ಚುನಾವಣಾ ಪ್ರಭಾರಿ ರವಿಶಂಕರ ಮಿಜಾರು, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳ, ಪಕ್ಷದ ಪ್ರಧಾನ ಕಾರ‍್ಯದರ್ಶಿ ಡೊಂಬಯ ಅರಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318