ಬಿಜೆಪಿಯ ಸುಳ್ಳು ಭರವಸೆಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು, ಮಹಿಳಾ ಸ್ವಾವಲಂಬನೆಗೆ ವಿಶೇಷ ಆಧ್ಯತೆ ನೀಡಿದ ರಮಾನಾಥ ರೈಯವರನ್ನು ಮತ್ತೊಮ್ಮೆ ಮಂತ್ರಿ ಮಾಡಬೇಕು-ಡಾ. ಪುಷ್ಪ ಅಮರನಾಥ್

ಬಂಟ್ವಾಳ: ಬಿಜೆಪಿ ಸಾಕಷ್ಟು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ಬಿಜೆಪಿಯ ಸುಳ್ಳು ಭರವಸೆಗಳ ಬಗ್ಗೆ ಮಹಿಳೆಯರು ಜಾಗೃತರಾಗಬೇಕು. ಮಹಿಳಾ ಸ್ವಾವಲಂಬನೆಗೆ ವಿಶೇಷ ಆಧ್ಯತೆ ನೀಡಿದ ಬಿ.ರಮಾನಾಥ ರೈಯವರನ್ನು ಗೆಲ್ಲಿಸಿ ಮತ್ತೊಮ್ಮೆ ಮಂತ್ರಿಯಾಗುವಲ್ಲಿ ಮಹಿಳೆಯರು ವಿಶೇಷ ಶ್ರಮ ವಹಿಸಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಕರೆ ನೀಡಿದ್ದಾರೆ.

ಬಿ.ಸಿ. ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಭಾನುವಾರ ನಡೆದ “ಮಾತೃಶಕ್ತಿ” ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿ ನೀಡಿದ ಯಾವುದೇ ಭರವಸೆಗಳನ್ನು ಅದು ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷ. ಈಗಲೂ ಗ್ಯಾರಂಟಿ ಕಾರ್ಡ್ ಮೂಲಕ ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ಘೋಷಿಸಿದೆ. ಇವೆಲ್ಲವನ್ನೂ ಕಾಂಗ್ರೇಸ್ ಪಕ್ಷ ಈಡೇರಿಸಲಿದೆ ಎಂದರು.

ಎಲ್ಲಾ ಜಾತಿ, ಧರ್ಮಗಳನ್ನು ಸಮಾನವಾಗಿ ಗೌರವಿಸುವ, ಎಲ್ಲರ ಒಳಿತಿಗಾಗಿ ಸೇವೆ ಮಾಡುವ ಜನನಾಯಕ ಬಿ. ರಮಾನಾಥ ರೈ ಅವರು ಮತ್ತೊಮ್ಮೆ ಶಾಸಕರಾಗಿ, ಸಚಿವರಾಗಬೇಕಾದ ಅವಶ್ಯಕತೆ ನಾಡಿನ ಜನತೆಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ರೈಯವರ ಗೆಲುವಿಗಾಗಿ ಅವಿರತ ಶ್ರಮ ಪಡಬೇಕು ಎಂದ ಅವರು ತೊಟ್ಟಿಲು ತೂಗುವ ಕೈಗಳು ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲವು ಎಂಬುದನ್ನು ದೇಶದ ಹೆಮ್ಮೆಯ ನಾಯಕಿ ಇಂದಿರಾ ಗಾಂಧಿ ತೋರಿಸಿಕೊಟ್ಟಿದ್ದಾರೆ. ಎರಡು ದಶಕಗಳ ಕಾಲ ಕಾಂಗ್ರೆಸ್ ಅನ್ನು ಸೋನಿಯಾ ಗಾಂಧಿ ಮುನ್ನಡೆಸಿದ್ದಾರೆ. ದೇಶದ ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕಾಂಗ್ರೆಸ್ ಕೊಡುಗೆ ಎಂದು ಅವರು ಸ್ಮರಿಸಿದರು.

ರೈಯವರು ಸಚಿವರಾಗುವುದು ಖಚಿತ-ಭವ್ಯ ನರಸಿಂಹಮೂರ್ತಿ

ರಾಜ್ಯ ಕಾಂಗ್ರೇಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಮಾತನಾಡಿ ಉಳುವವನೇ ಹೊಲದ ಒಡೆಯ ಕಾನೂನು ಜಾರಿಯಾದ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಕುಟುಂಬದಿಂದ ಬಂದಿದ್ದರೂ ಕಾಂಗ್ರೆಸ್ ನಲ್ಲೇ ಇನ್ನೂ ಸೇವೆ ಸಲ್ಲಿಸುತ್ತಿರುವ ರಮಾನಾಥ ರೈಗಳು ಈ ಬಾರಿ ಶಾಸಕರಾಗಿ ಆಯ್ಕೆಯಾದರೆ ಮತ್ತೊಮ್ಮೆ ಸಚಿವರಾಗುವುದು ಖಚಿತ. ಅವರು ಸಚಿವರಾದರೆ ಜನರ ಸಮಗ್ರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಂಡು ರೈಯವರ ಗೆಲುವಿಗಾಗಿ ಮಹಿಳೆಯರು ವಿಶೇಷವಾಗಿ ಪ್ರಯತ್ನ ಪಡಬೇಕು ಎಂದರು.

ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೇಸ್ ಗೆಲ್ಲಿಸಿ

ಎಲ್ಲಾ ಧರ್ಮಗಳಲ್ಲೂ ಸ್ತ್ರೀಯರಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಮ್ಮನಸ್ಸಿನಿಂದ ಒಗ್ಗಟ್ಟಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಶಿಬಾ ರಾಮಚಂದ್ರನ್ ಮನವಿ
ಮಾಡಿದರು.

ಮಹಿಳಾ ಮೀಸಲಾತಿಗೆ ಕಾಂಗ್ರೇಸ್ ವಿಶೇಷ ಆಧ್ಯತೆ ನೀಡಿದೆ-ರೈ

ಕಳೆದ ಚುನಾವಣೆಯಲ್ಲಿ ನಾನು ಊಹಿಸಲು ಅಸಾಧ್ಯವಾದ ಅಪಪ್ರಚಾರಗಳನ್ನು ನಡೆಸಿ ನನ್ನನ್ನು ಸೋಲಿಸಲಾಗಿದೆ. ಆದರೆ ಈ ಸುಳ್ಳು ಅಪಪ್ರಚಾರದ ಬಗ್ಗೆ ಕ್ಷೇತ್ರದ ಜನತೆಗೆ ಈಗ ಅರಿವಾಗಿದೆ. ಶಾಸಕನಾಗಿ, ಸಚಿವನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ಹೌದಾದರೆ, ಈ ಬಾರಿ ಚುನಾವಣೆಯಲ್ಲಿ ನೀವು ಗೆಲ್ಲಿಸಿಕೊಡಬೇಕು ಎಂದು ರೈ ಮನವಿ ಮಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ. ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಅಪ್ಪಿ, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ಮೊರಾಸ್ ವೇದಿಕೆಯಲ್ಲಿದ್ದರು. ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಕಾರ್ಯಕ್ರಮದ ಸಂಘಟಕಿ ಜಯಂತಿ ವಿ. ಪೂಜಾರಿ ಸ್ವಾಗತಿಸಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕೆ.ಪಿ.ಸಿ.ಸಿ. ಸದಸ್ಯರಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮುಹಮ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್, ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಾಸು ಪೂಜಾರಿ, ಶಬ್ಬೀರ್ ಸಿದ್ಧಕಟ್ಟೆ, ಯುವ ಕಾಂಗ್ರೇಸ್ ಅಧ್ಯಕ್ಷರುಗಳಾದ ಸುರೇಶ್ ಪೂಜಾರಿ ಜೋರಾ, ಇಬ್ರಾಹಿಂ ನವಾಜ್ ಮೊದಲಾದವರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318