ಜನಾರ್ಧನ ಪೂಜಾರಿ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡ ಬಿ.ರಮಾನಾಥ ರೈ

ಲೊರೆಟ್ಟೊಪದವಿನಲ್ಲಿ ರೈಯವರಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

ಬಂಟ್ವಾಳ: ಪ್ರಜಾಧ್ವನಿ ಯಾತ್ರೆಯ ಆರನೇ ದಿನದ ಯಾತ್ರೆಯ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈಯವರು ತಮ್ಮ ನಿಯೋಗದೊಂದಿಗೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.

ಪಂಜಿಕಲ್ಲು ಮತ್ತು ಬಂಟ್ವಾಳ ಕಸಬಾ ಗ್ರಾಮದಲ್ಲಿ ಅಪಾರ ಜನಸ್ತೋಮದೊಂದಿಗೆ ಸಂಚರಿಸಿದ ಪ್ರಜಾಧ್ವನಿ ಯಾತ್ರೆಯು ಸಂಜೆ ವೇಳೆ ಲೊರೆಟ್ಟೊಪದವಿಗೆ ಬಂದಾಗ ಯಾತ್ರಾ ಸಂಚಾಲಕ ಪಿಯೂಸ್ ರೋಡ್ರಿಗಸ್ ಹಾಗೂ ಬಿ. ಕಸ್ಬಾ ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರೋಡ್ರಿಗಸ್ ಅವರ ನೇತೃತ್ವದಲ್ಲಿ ಕ್ರೇನ್ ಮೂಲಕ ಪುಷ್ಪವೃಷ್ಟಿ ಸುರಿಸಿ ರಮಾನಾಥ ರೈ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಯಿತು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ರೈಯವರಿಗೆ ಜೈಕಾರ ಕೂಗಿದರು. ನೂರಾರು ಮಂದಿ ರೈಯವರಿಗೆ ಮಾಲಾರ್ಪಣೆ ಮಾಡಿ ವಿಶೇಷವಾಗಿ ಸ್ವಾಗತಿಸಿದರು. ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಪ್ರಧಾನ ಭಾಷಣ ಮಾಡಿದರು.

ಕಾರ್ಯಕರ್ತರನ್ನು ಬಲಿಕೊಟ್ಟು ಪಕ್ಷ ಕಟ್ಟಿರುವುದೇ ಬಿಜೆಪಿಯ ಸಾಧನೆ-ಶಾಹುಲ್ ಹಮೀದ್

ದೇಶಕ್ಕಾಗಿ ಅದೆಷ್ಟೋ ಕಾಂಗ್ರೆಸ್ ನಾಯಕರ ಬಲಿದಾನವಾಗಿದೆ. ನಾಯಕರನ್ನು ಬಲಿ ಕೊಟ್ಟು ದೇಶ ಉಳಿಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದ್ದರೆ, ಕಾರ್ಯಕರ್ತರನ್ನು ಬಲಿಕೊಟ್ಟು ಪಕ್ಷ ಕಟ್ಟಿದ ಇತಿಹಾಸ ಬಿಜೆಪಿಗಿದೆ. ಪಕ್ಷಕ್ಕಾಗಿ, ರಾಜಕೀಯಕ್ಕಾಗಿ ಮುಗ್ಧ ಕಾರ್ಯಕರ್ತರನ್ನು, ಜನಸಾಮಾನ್ಯರನ್ನು ಬಲಿತೆಗೆದುಕೊಂಡಿರುವುದೇ ಬಿಜೆಪಿಯ ಬಲುದೊಡ್ಡ ಸಾಧನೆಯಾಗಿದೆ ಎಂದು ಕೆ.ಕೆ.ಶಾಹುಲ್ ಹಮೀದ್ ಟೀಕಿಸಿದರು.

ತುಂಡರಸರ ಕೈಯಲ್ಲಿ ಹರಿದು ಹಂಚಿ ಹೋಗಿದ್ದ ದೇಶವನ್ನು ತ್ರಿವರ್ಣ ಧ್ವಜದಡಿ ಒಂದೇ ದೇಶವಾಗಿ ಕಟ್ಟಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕಾಗಿ ಮಾಡಿದ ತ್ಯಾಗ-ಕೆಲಸ ನೋಡಿದರೆ ಈ ದೇಶದ ಜನ ಬೇರೆ ಪಕ್ಷಕ್ಕೆ ಓಟು ಕೊಡಲು ಸಾಧ್ಯವೇ ಇಲ್ಲ. ಈ ಬಾರಿ ಎಲ್ಲ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಮುಂದಿದೆ. ರೈಗಳ ವಿಜಯವನ್ನೂ ಸಮೀಕ್ಷೆಗಳು ಬಹಿರಂಗಪಡಿಸಿದೆ. ಇದರಿಂದ ವಿರೋಧ ಪಕ್ಷ ಬಿಜೆಪಿ ಚಡಪಡಿಸುತ್ತಿದೆ ಎಂದ ಶಾಹುಲ್ ಹಮೀದ್ ಕಾಂಗ್ರೆಸ್ ಸರಕಾರ ಒಂದು ಸಿಲಿಂಡರ್ ಬೆಲೆಯನ್ನು ಕಿಂಚಿತ್ ಏರಿಸಲು ಐವತ್ತು ವರ್ಷ ಬೇಕಾದರೆ, ಬಿಜೆಪಿ ಬರೇ ಏಳು ವರ್ಷದಲ್ಲೇ ಸಾವಿರಾರು ರೂಪಾಯಿ ದಾಟಿಸಿ ದಾಖಲೆ ಮೆರೆದಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಜನತೆಗೆ ಬದುಕುವ ಹಕ್ಕನ್ನು ಕೊಟ್ಟಿದೆ. ಆದರೆ ಬಿಜೆಪಿ ಜನರ ಖಾಸಗಿ ಬದುಕಿನ ಮೇಲೆಯೂ ಸವಾರಿ ಮಾಡಿ ಜನರ ಸ್ವಾತಂತ್ರ್ಯವನ್ನೇ ಕಸಿಯುತ್ತಿದೆ. ಪ್ರತಿಯೊಂದರಲ್ಲೂ ತಾರತಮ್ಯ ಧೋರಣೆ ಅನುಸರಿಸುತ್ತಿರುವ ಬಿಜೆಪಿಗರಿಗೆ ತಕ್ಕ ಉತ್ತರ ನೀಡಲು ಜನ ಸಿದ್ಧರಾಗಿದ್ದಾರೆ. ಅಭಿವೃದ್ಧಿಯ ಹರಿಕಾರ ರೈಗಳನ್ನು ಗೆಲ್ಲಿಸಿ ಮಂತ್ರಿ ಮಾಡಲು ಕ್ಷೇತ್ರದ ಜನತೆ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದು ಶಾಹುಲ್ ಹಮೀದ್ ಹೇಳಿದರು.

ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಂಗಣ, ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಹಾಗೂ ಅಂಡರ್ ಆರ್ಮ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ರೈ ಭರವಸೆ

 ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಮುಂದಿನ ಬಾರಿ ಗೆದ್ದು ಬಂದಲ್ಲಿ ಬೆಂಜನಪದವಿನಲ್ಲಿ 100 ಕೋಟಿ ವೆಚ್ಚದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡುವುದರ ಜೊತೆಗೆ ಬಂಟ್ವಾಳದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕರು ಅತೀ ಹೆಚ್ಚು ನೆಚ್ಚಿಕೊಂಡಿರುವ ಅಂಡರ್ ಆರ್ಮ್ ಕ್ರಿಕೆಟ್ ಕ್ರೀಡಾಂಗಣವನ್ನು ಬಂಟ್ವಾಳದಲ್ಲಿ ನಿರ್ಮಿಸುವುದಾಗಿ ಭರವಸೆ ನೀಡಿದರು. 

ಜಿ ಪಂ, ತಾ ಪಂ ಚುನಾವಣೆ ನಡೆಸದೆ ಸ್ಥಳೀಯಾಡಳಿತದ ಮೂಲಕ ಸೌಲಭ್ಯ ಪಡೆಯುವ ಜನರ ಹಕ್ಕಿಗೆ ಬೊಮ್ಮಾಯಿ ಸರಕಾರ ಕಲ್ಲು ಹಾಕಿದೆ. ಜಿ ಪಂ, ಪುರಸಭಾ ನಗರೋತ್ಥಾನ ದುಡ್ಡುಗಳನ್ನೂ ಹಂಚುವವರು ಶಾಸಕರು. ಶಾಸಕರನ್ನು ಸರ್ವಾಧಿಕಾರಿ ಮಾಡುವ ಮೊದಲ ಅಜೆಂಡಾ ಬೊಮ್ಮಾಯಿ ಸರಕಾರದ್ದಾಗಿದೆ. ಪಂಚಾಯತ್ ಚುನಾವಣೆಯ ಮೀಸಲಾತಿಯಲ್ಲೂ ಹಸ್ತಕ್ಷೇಪ ಮಾಡಿ ಅರ್ಹರನ್ನು ಚುನಾವಣೆಗೆ ಸ್ಪರ್ಧಿಸದಂತೆ ಮಾಡುವ ಹುನ್ನಾರ ಬಿಜೆಪಿ ಸರಕಾರದ್ದು ಎಂದರು.

ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಜನಾರ್ದನ ಚೆಂಡ್ತಿಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ತಾ ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಬಿ ಕಸ್ಬಾ ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರೋಡ್ರಿಗಸ್, ಪ್ರಮುಖರಾದ ಪಿ.ಎ. ರಹೀಂ, ಉಮೇಶ್ ಕುಲಾಲ್, ಜಗದೀಶ್ ಕೊಯಿಲ, ದೇವಪ್ಪ ಕುಲಾಲ್, ತಿಮ್ಮಪ್ಪ ಪೂಜಾರಿ, ಜಯಂತಿ ವಿ.ಪೂಜಾರಿ, ಸ್ಟೀವನ್ ಡಿಸೋಜ, ಚಂದ್ರಶೇಖರ ಪೂಜಾರಿ, ಸಿದ್ದೀಕ್ ಸರವು, ಪ್ರವೀಣ್ ರೋಡ್ರಿಗಸ್ ವಗ್ಗ, ರಾಜೀವ್ ಕಕ್ಕೆಪದವು, ವೆಂಕಪ್ಪ ಪೂಜಾರಿ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಸಂಜಿತ್ ಪೂಜಾರಿ, ತಿಲಕ್ ಮಂಚಿ, ಅಲ್ತಾಫ್ ಸಂಗಬೆಟ್ಟು, ರಂಜಿತ್ ಪೂಜಾರಿ, ಆಲ್ಬರ್ಟ್ ಮೆನೆಜಸ್, ಲವಿನಾ ಮೊರಾಸ್, ಸದಾನಂದ ಶೆಟ್ಟಿ ಪಂಜಿಕಲ್ಲು, ಮನೋಹರ ಕುಲಾಲ್, ನಾರಾಯಣ ನಾಯ್ಕ ಮೊದಲಾದವರು ಭಾಗವಹಿಸಿದ್ದರು.

ಬಂಟ್ವಾಳ ಪುರಸಭಾ ಸದಸ್ಯ ಬಿ. ವಾಸು ಪೂಜಾರಿ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುದರ್ಶನ್ ಜೈನ್ ವಂದಿಸಿದರು. ಮಾಣಿ ಗ್ರಾ. ಪಂ. ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318