ಶೂನ್ಯ ಬಡ್ಡಿ ಬೆಳೆ ಸಾಲ ರೂ. 3 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ- ಸಿದ್ಧಕಟ್ಟೆ ಸಹಕಾರಿ ಸಂಘದಿಂದ ಸರಕಾರಕ್ಕೆ ಅಭಿನಂದನೆ

ಬಂಟ್ವಾಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸುವ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮೊತ್ತವನ್ನು ರೂ.3 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ಸಂಘದಲ್ಲಿ ಜರಗಿದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ 2020-21 ನೇ ಸಾಲಿನ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ರೈತರು ಮಾಡಿದ ಮನವಿಯಂತೆ ಶೂನ್ಯ ಬಡ್ಡಿ ಬೆಳೆ ಸಾಲವನ್ನು ರೂ.3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ರಾಜ್ಯ ಸರಕಾರಕ್ಕೆ ಮನವಿ ಮಾಡಲು
ನಿರ್ಣಯಿಸಲಾಗಿತ್ತು. ಅದರಂತೆ ರಾಜ್ಯ ಸರಕಾರದ ಸಹಕಾರ ಸಚಿವರಿಗೆ ಮನವಿ ಪತ್ರ ಬರೆಯಲಾಗಿದ್ದು, ಇದೀಗ ಸಂಘದ ಮಹಾಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಫಲಶ್ರುತಿ ಸಿಕ್ಕಿದಂತಾಗಿದೆ. ಈ ನಿಟ್ಟಿನಲ್ಲಿ ಮಹಾಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸರಕಾರ
ಮನ್ನಣೆ ನೀಡಿದಂತಾಗಿದೆ ಎಂದು ಅಭಿಪ್ರಾಯ ಪಟ್ಟರು.


ಇದಕ್ಕೆ ಸಹಕರಿಸಿದ ಕರಾವಳಿ ಜಿಲ್ಲೆಯ ಸಂಸದರು, ಎಲ್ಲಾ ಶಾಸಕರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಹಾಗೂ ಜಿಲ್ಲೆಯ ಹಿರಿಯ ಸಹಕಾರಿಗಳಿಗೆ ಧನ್ಯವಾದ ಸಮರ್ಪಣೆ ಮಾಡಲು ನಿರ್ಣಯಿಸಲಾಯಿತು.
ಅದೇ ರೀತಿಯಲ್ಲಿ ಈಗಾಗಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮಧ್ಯಮಾವಧಿ ಕೃಷಿ ಅಭಿವೃದ್ಧಿ ಸಾಲದ ಮಿತಿಯನ್ನು ಈಗಿರುವ ಗರಿಷ್ಠ ಮಿತಿ ರೂ. 10 ಲಕ್ಷ ದಿಂದ 20 ಲಕ್ಷಕ್ಕೆ ಏರಿಕೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ, ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೋಡುಂಬ, ರಾಜೇಶ್ ಶೆಟ್ಟಿ ಕೊನೆರೋಟ್ಟು, ದಿನೇಶ್ ಪೂಜಾರಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಉಮೇಶ್ ಗೌಡ, ದೇವರಾಜ್ ಸಾಲ್ಯಾನ್, ಹರೀಶ್ ಆಚಾರ್ಯ, ಅರುಣ ಎಸ್ ಶೆಟ್ಟಿ, ಮಂದಾರತಿ ಎಸ್ ಶೆಟ್ಟಿ, ವೃತ್ತಿಪರ ನಿರ್ದೇಶಕ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318