ಹೇಳಿದ್ದನ್ನು ಮಾಡಿದ್ದೇನೆ, ಮಾಡಿದ್ದನ್ನು ಹೇಳಿದ್ದೇನೆ. ಯಾರೋ ಮಾಡಿದ್ದನ್ನು ನಾನು ಮಾಡಿದ್ದೇನೆ ಎಂದು ಹೇಳುವ ಜಾಯಮಾನ ನನ್ನದಲ್ಲ-ಬಿ.ರಮಾನಾಥ ರೈ

ಬಂಟ್ವಾಳ: ನಾನು ಅಧಿಕಾರದಲ್ಲಿದ್ದಾಗ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿದೆ. ದ.ಕ.ಜಿಲ್ಲೆಯಲ್ಲೇ ಅಧಿಕ ಪ್ರಮಾಣದ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ಬಂದಿದೆ. ನಾನು ಹೇಳಿದ್ದನ್ನು ಮಾಡಿದ್ದೇನೆ. ಮಾಡಿದ್ದನ್ನು ಹೇಳಿದ್ದೇನೆ. ಆದರೆ ಯಾರೋ ಮಾಡಿದ್ದನ್ನು ನಾನು ಮಾಡಿದ್ದೇನೆ ಎನ್ನುವ ಜಾಯಮಾನ ನನ್ನದಲ್ಲ. ಹಾಗೆ ಹೇಳಿದರೆ ದೇವರೂ ನಮ್ಮನ್ನು ಮೆಚ್ಚೊಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ಕಾಂಗ್ರೇಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಅಧಿಕಾರಾವಧಿಯಲ್ಲಿ ನಡೆದ ಅಭಿವೃದ್ಧಿ ಯೋಜನೆಗಳ ಪೈಕಿ ಕೆಲವೊಂದನ್ನು ಉಲ್ಲೇಖಿಸಿದರು. ನಾನು ಅಧಿಕಾರಕ್ಕಾಗಿ ಅಥವಾ ಓಟಿಗಾಗಿ ಬಂಟ್ವಾಳಕ್ಕೆ ಬಂದವನಲ್ಲ. ನಾನು ಬಂಟ್ವಾಳದಲ್ಲೇ ವಿವಿಧ ಸಾಮಾಜಿಕ-ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ಬೆಳೆದವನು. ಕ್ಷೇತದ ಜನತೆ ಸೇವೆ ಮಾಡುವ ಅವಕಾಶ ನೀಡಿದಾಗ ಶಾಸಕನಾಗಿ, ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಅಧಿಕಾರಾವಧಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕವಾಗಿ ಜನತೆಯ ಸೇವೆ ಮಾಡಿದ ತೃಪ್ತಿ ನನಗಿದೆ. ಆದರೆ ಅಪಪ್ರಚಾರದಿಂದ ನನಗೆ ಸೋಲಾಗಿದೆ. ಸತ್ಯ ಏನೆಂಬುದು ಜನತೆಗೆ ಈಗ ಗೊತ್ತಾಗಿದೆ. ಈ ಬಾರಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಚುನಾವಣೆ ನಡೆಯುತ್ತಿದೆ. ಈ ಬಾರಿ 9 ನೇ ಚುನಾವಣೆಯನ್ನು ಎದುರಿಸುತ್ತಿದ್ದೇನೆ. ಜನತೆ ಒಮ್ಮೆ ಅವಕಾಶ ಕೊಟ್ಟರೆ ಅಧ್ಭುತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ. ಇದು ಕೇವಲ ಭರವಸೆಯಲ್ಲ, ಬದಲಾಗಿ ಬದ್ಧತೆ. ಇದುವರೆಗೂ ಹೇಳಿದ್ದನ್ನು ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದು ರಮಾನಾಥ ರೈ ಹೇಳಿದರು. 5000 ಕೋಟಿಗೂ ಅಧಿಕ ಅನುದಾನ:

ನನ್ನ ಅಧಿಕಾರಾವಧಿಯ ಕೊನೆ ಐದು ವರ್ಷದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಐದು ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿದೆ. ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳು ನಮ್ಮಲ್ಲಿದೆ. ಬೇಕಾದರೆ ಮಾಹಿತಿ ಹಕ್ಕಿನ ಮೂಲಕವೂ ಮಾಹಿತಿ ಪಡೆಯಬಹುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಆರ್ ಟಿ ಓ ಕಚೇರಿ, ಟ್ರಾಫಿಕ್ ಪೋಲೀಸ್ ಠಾಣೆ, ಅಂಬೇಡ್ಕರ್ ಭವನ, ಕೆಎಸ್ ಆರ್ ಟಿ ಸಿ ಡಿಪೊ ಮತ್ತು ನಿಲ್ದಾಣ, ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಉಳಾಯಿಬೆಟ್ಟು ಯೋಜನೆ, ಪಶ್ಚಿಮವಾಹಿನಿ ಯೋಜನೆ, ನದಿಯಲ್ಲಿ ಅಣೆಕಟ್ಟು ಮತ್ತು ಸೇತುವೆಗಳ ನಿರ್ಮಾಣ, ರಾಜೀವ ಗಾಂಧಿ ಸಮುದಾಯ ಭವನಗಳ ನಿರ್ಮಾಣ, ಬಂಟ್ವಾಳ ಅಸ್ಪತ್ರೆಯ ಮೇಲ್ದರ್ಜೆ, ಕ್ರೀಡಾಂಗಣ, ಐಬಿ, ಪಾರ್ಕ್, ಸೌಹಾರ್ಧ ಸೇತುವೆ, ಪಂಜೆ ಮಂಗೇಶರಾಯ ಭವನ, ಸಮಗ್ರ ಒಳಚರಂಡಿ ಯೋಜನೆ, ಅತೀ ಹೆಚ್ಚು ಮಂದಿಗೆ ವಸತಿ ಸೌಲಭ್ಯ, ಹೊಸ ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳ ನಿರ್ಮಾಣ, ನೂರಾರು ಆರಾದನಾಲಯಗಳ ಅಭಿವೃದ್ಧಿ ಸಹಿತ ನೂರಾರು ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ನಡೆಸಲಾಗಿದೆ ಎಂದು ರೈ ಹೇಳಿದರು.

ನನ್ನ ಅಧಿಕಾರಾವಧಿಯಲ್ಲಿ ಮಂಜೂರಾತಿಯಾದ ಕೆಲವೊಂದು ಅಭಿವೃದ್ಧಿ ಯೋಜನೆಗಳನ್ನು ಪೂರ್ತಿಗೊಳಿಸಲು ಈಗಿನವರಿಗೆ ಇನ್ನೂ ಸಾಧ್ಯವಾಗಿಲ್ಲ. ಅಭಿವೃದ್ಧಿ ಎಂದರೆ ರಸ್ತೆ ನಿರ್ಮಾಣ ಮಾತ್ರವಲ್ಲ, ಡಾಮರಿನ ಮೇಲೆ ಡಾಮರು ಹಾಕುವುದು ಅಭಿವೃದ್ಧಿಯಲ್ಲ, ಬದಲಾಗಿ ಹೊಸ ಸೇತುವೆ, ರಸ್ತೆಗಳು ನಿರ್ಮಾಣವಾಗಬೇಕು. ಅಭಿವೃದ್ಧಿಯೆಂದರೆ ಕೇವಲ ಹಕ್ಕುಪತ್ರ ಕೊಡುವುದಲ್ಲ, ಬದಲಾಗಿ ಮನೆ ಕೊಡಬೇಕು. ಯಾವುದೇ ಯೋಜನೆಗೆ ಎಸ್ಟಿಮೇಟ್ ಹೆಚ್ಚಾಗಿದೆ ಎಂಬ ಕಾರಣಕ್ಕೆ ಆ ಯೋಜನೆ ಅವರು ಮಾಡಿದ್ದು ಎಂದಾಗುವುದಿಲ್ಲ ಎಂದು ಆರೋಪಿಸಿದ ರಮಾನಾಥ ರೈ ನಾವು ಕೇವಲ ಶಂಕುಸ್ಥಾಪನೆ ಮಾಡಿದ್ದಲ್ಲ, ಯಾರೋ ಮಾಡಿದ ಕಾಮಗಾರಿಗಳನ್ನು ಉದ್ಘಾಟಿಸಿದ್ದೂ ಅಲ್ಲ, ನಾವೇ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿ ಉದ್ಘಾಟಿಸಿದ್ದೇವೆ ಎಂಬ ಆತ್ಮತೃಪ್ತಿ ನಮಗಿದೆ ಎಂದರು.

ಮಾರ್ಚ್ 10ರಿಂದ ರಥಯಾತ್ರೆ:

ಮಾರ್ಚ್ 10ರಿಂದ 16 ದಿನಗಳ ಕಾಲ ಕಾಂಗ್ರೇಸ್ ಪಕ್ಷದ ರಥಯಾತ್ರೆ ಬಂಟ್ವಾಳ ಕ್ಷೇತ್ರದಲ್ಲಿ ಸಂಚರಿಸಲಿದ್ದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ರಥಯಾತ್ರೆಗೆ ಚಾಲನೆ ದೊರೆಯಲಿದೆ. ಪ್ರತೀ ದಿನ ಮೂರು ಗ್ರಾಮ ಪಂಚಾಯತು ವ್ಯಾಪ್ತಿಯ ಹಳ್ಳಿ ಹಳ್ಳಿಯಲ್ಲಿ ರಥಯಾತ್ರೆ ಸಂಚರಿಸಲಿದ್ದು ಪ್ರತೀ ದಿನ ಸಂಜೆ ವೇಳೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಯಾತ್ರೆಯಲ್ಲಿ ಪಕ್ಷದ ಜಿಲ್ಲಾ, ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ರೈ ಹೇಳಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ಬಿ.ಪದ್ಮಶೇಖರ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಜಗದೀಶ ಕೊಯಿಲ, ಸುಭಾಶ್ಚಂದ್ರ ಶೆಟ್ಟಿ, ಸುರೇಶ್ ಪೂಜಾರಿ ಜೋರಾ, ಜನಾರ್ಧನ ಚೆಂಡ್ತಿಮಾರು, ಬಾಲಕೃಷ್ಣ ಅಂಚನ್, ವೆಂಕಪ್ಪ ಪೂಜಾರಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವರದಿ: ಗೋಪಾಲ ಅಂಚನ್

ಸಂಪಾದಕರು:

ಯುವಧ್ವನಿ ನ್ಯೂಸ್ ಕರ್ನಾಟಕ. ಮೊ:9449104318