ಬಹುಮುಖಿ ಸಾಧಕರಾದ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಗೆ ‘ಪತ್ರಕರ್ತ ಸೌರಭ’ ರಾಜ್ಯ ಪ್ರಶಸ್ತಿ


ಮಂಗಳೂರು:ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಕೊಡಮಾಡುವ “ಪತ್ರಕರ್ತ ಸೌರಭ” ರಾಜ್ಯ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಬಹುಮುಖಿ ಸಾಧಕ, ಕವಿ, ಸಾಹಿತಿ ಮತ್ತು ಸಂಘಟಕರಾದ ಜಯಾನಂದ ಪೆರಾಜೆ ಆಯ್ಕೆಯಾಗಿದ್ದಾರೆ ಎಂದು ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ ಲಂಬಾಣಿ ಹೂವಿನಹಡಗಲಿ ತಿಳಿಸಿದ್ದಾರೆ.


ಫೆಬ್ರವರಿ ೨೬ರಂದು ಶ್ರೀ ಶಿವರಾಮ ಅವಧೂತರ ಆಶ್ರಮ, ಹೇಮಕೂಟ ಹಂಪಿಯಲ್ಲಿ ನಡೆಯುವ ರಾಜ್ಯ ಸಮ್ಮೇಳನ ಮತ್ತು ಸಾವಿರ ಕಾವ್ಯ ಗೋಷ್ಠಿಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಾಜ್ಯದ ಪ್ರಮುಖ ದಿನ ಪತ್ರಿಕೆಗಳಲ್ಲಿ ಕಳೆದ ೩೫ ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಜಯಾನಂದ ಪೆರಾಜೆಯವರು ಪತ್ರಕರ್ತರಾಗಿ, ಕವಿಯಾಗಿ, ಸಾಹಿತಿಯಾಗಿ, ಸಂಘಟಕರಾಗಿ, ನಾಟಕ-ಯಕ್ಷಗಾನ ಕಲಾವಿದರಾಗಿ ಚಿರಪರಿಚಿತರು. ೧೯೮೬ ರಲ್ಲಿ ಸುದ್ದಿ ಬಿಡುಗಡೆ ವಾರಪತ್ರಿಕೆಯ ಬಂಟ್ವಾಳ ವರದಿಗಾರರಾಗಿ ಪತ್ರಿಕಾರಂಗಕ್ಕೆ ಪ್ರವೇಶಿದ ಇವರು ಹೊಸದಿಗಂತ, ನಮ್ಮ ಬಂಟ್ವಾಳ, ಜನ ಈ ದಿನ, ನೇತ್ರಾವತಿ ವಾರ್ತೆ, ಮುಂಗಾರು, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ವಂಶ ಮೊದಲಾದ ಪತ್ರಿಕೆಗಳಲ್ಲಿ ನಿರಂತರ ವರದಿಗಾರರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ, ಅಂಕಣ ಬರಹಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹೊಸದಿಗಂತ ದಿನ ಪತ್ರಿಕೆ ಮತ್ತು ನವ್ಯವಾಣಿ ವಾರಪತ್ರಿಕೆಯಲ್ಲಿ ವರದಿಗಾರರಾಗಿ, ಜಿಲ್ಲಾ ಜೇನು ವ್ಯವಸಾಯಗಾರರ ಸಂಘದ ಮುಖವಾಣಿ ಮಧು ಪ್ರಪಂಚ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ.
ವಿವಿಧ ಸ್ಮರಣ ಸಂಚಿಕೆಗಳ ಸಂಪಾದಕರಾಗಿಯೂ ಇವರು ಸೇವೆ ಸಲ್ಲಿಸಿದ್ದು ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನ, ಕವನ, ಕತೆ, ಅಂಕಣ ಬರಹಗಳು ಪ್ರಕಟಗೊಂಡಿದೆ. ಸಾಹಿತ್ಯ ಸಮ್ಮೇಳನಗಳ ಸಹಿತ ಹಲವಾರು ಕವಿಗೋಷ್ಠಿಗಳಲ್ಲಿ ಇವರು ಕವನ ವಾಚಿಸಿದ್ದು ಭಾವಬಿಂದು ಕವನ ಸಂಕಲನ ಪ್ರಕಟಗೊಂಡಿದೆ.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪೆರಾಜೆಯವರು ದ.ಕ. ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷರಾಗಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.
ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷ ಸಹಿತ ವಿವಿಧ ಕಲೆ, ಸಾಹಿತ್ಯ, ಸಾಂಸ್ಕ್ರತಿಕ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ಪೆರಾಜೆಯವರು ನಿವೃತ್ತ ಶಿಕ್ಷಕರಾಗಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿಯೂ ಚಿರಪರಿಚಿತರಾಗಿದ್ದಾರೆ. ಕನ್ನಡ ರತ್ನ, ಚೈತನ್ಯ ಶ್ರೀ, ಶಿಕ್ಷಕರ ರತ್ನ, ಪತ್ರಿಕಾ ರಂಗದ ಭೀಷ್ಮ ಮೊದಲಾದ ಗೌರವ ಪ್ರಶಸ್ತಿಗಳ ಸಹಿತ ಹಲವಾರು ಪುರಸ್ಕಾರ, ಸನ್ಮಾನಗಳು ಇವರಿಗೆ ದೊರಕಿದೆ.
ವರದಿ:ಗೋಪಾಲ ಅಂಚನ್ ಸಂಪಾದಕರು: ಯುವಧ್ಚನಿ ನ್ಯೂಸ್, ಕರ್ನಾಟಕ ಮೊ:9449104318