ಮಾರ್ಚ್ 4ರಂದು ನಾವೂರು ಕೂಡಿಬೈಲಿನಲ್ಲಿ “ಬಂಟ್ವಾಳ ಕಂಬಳ”-ಭರದ ಸಿದ್ಧತೆ

ಬಂಟ್ಬಾಳ: “ಬಂಟ್ವಾಳ ಕಂಬಳ”ವೆಂದೇ ಪ್ರಸಿದ್ಧಿ ಪಡೆದಿರುವ ಮೂಡೂರು- ಪಡೂರು ಕಂಬಳವು ಮಾರ್ಚ್ 4ರಂದು ನಡೆಯಲಿದ್ದು ಭರದ ಸಿದ್ಧತೆ ನಡೆಯುತ್ತಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಬಿ.ಸಿ.ರೋಡಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 12ನೇ ವರ್ಷದ ಕಂಬಳವು ಅಭೂತಪೂರ್ವವಾಗಿ, ವೈಭವಯುತವಾಗಿ ಸಂಪನ್ನಗೊಳ್ಳುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ನಾವೂರು ಕೂಡಿಬೈಲಿನಲ್ಲಿ ಸಕಲ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿದೆ ಎಂದರು


‌‌ ಹತ್ತು ವರ್ಷ ಕಾವಳಕಟ್ಟೆಯಲ್ಲಿ ಮೂಡೂರು-ಪಡೂರು ಕಂಬಳವನ್ನು ಮಾದರಿಯಾಗಿ ನಡೆಸಲಾಗಿದೆ. ಈ ಕಂಬಳ ಕೂಟ ಕಂಬಳ ಕ್ಷೇತ್ರದಲ್ಲಿ ಕೆಲವು ಹೊಸ ದಾಖಲೆಗಳನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಗಿದೆ. ಕೆಲವರ್ಷದ ಬಳಿಕ ಕಳೆದ ವರ್ಷ ಬಂಟ್ವಾಳ ತಾಲೂಕಿನ ನಾವೂರು ಕೂಡಿಬೈಲಿನಲ್ಲಿ ಸ್ಥಳೀಯರ ಸಹಕಾರದೊಂದಿಗೆ “ಬಂಟ್ವಾಳ ಕಂಬಳ” ಹೆಸರಿನಲ್ಲಿ ಹನ್ನೊಂದನೇ ವರ್ಷದ ಕಂಬಳವನ್ನು ನಡೆಸಲಾಗಿತ್ತು. ಅದು ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಇದೀಗ ಹನ್ನೆರಡನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳ” ಮತ್ತಷ್ಟು ಮಾದರಿಯಾಗಿ ರೂಪಿಸುವ ಉದ್ಧೇಶದಿಂದ ವ್ಯಾಪಕ ಸಿದ್ಧತೆಗಳು ನಡೆಯುತ್ತಿದೆ ಎಂದು ಬಿ.ರಮಾನಾಥ ರೈ ಹೇಳಿದರು. ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದಗಳೊಂದಿಗೆ “ಬಂಟ್ವಾಳ ಕಂಬಳ”ವು ಸಮಿತಿಯ ಸಂಪೂರ್ಣ ತೊಡಗಿಸುವಿಕೆ, ಸ್ಥಳೀಯರ ಸಂಪೂರ್ಣ ಸಹಭಾಗಿತ್ವ ಹಾಗೂ ಸರ್ವ ಕಂಬಳಾಭಿಮಾನಿಗಳ ಸಹಕಾರದೊಂದಿಗೆ ಸೌಹಾರ್ದತೆಯ ಪ್ರತೀಕವಾಗಿ ಮೂಡಿಬರಲಿದೆ ಎಂದು ರೈ ವಿವರಿಸಿದರು. ಕಳೆದ ವರ್ಷ ಕಂಬಳ ಸೀಸನ್ ಕೊನೆಕ್ಷಣದಲ್ಲಿ ಕಂಬಳ ನಡೆಸಲಾಗಿತ್ತು. ಆದರೂ ಕೋಣದ ಮಾಲೀಕರು ಮತ್ತು ಜಿಲ್ಲಾ ಕಂಬಳ ಸಮಿತಿ ಸಹಕಾರದಿಂದ ಕಂಬಳ ಕೂಟ ಯಶಸ್ವಿಯಾಗಿತ್ತು. ಮಳೆಯಿಂದಾಗಿ ಕೆಲವೊಂದು ಸಮಸ್ಯೆ ಎದುರಾಗಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲೇ ಕಂಬಳ ಸಮಿತಿ ಅನುವು ಮಾಡಿಕೊಟ್ಟ ಹಿನ್ನಲೆಯಲ್ಲಿ ಮತ್ತಷ್ಟು ವ್ಯವಸ್ಥಿತವಾಗಿ ಕಂಬಳವನ್ನು ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಜೋಡುಕರೆಗಳನ್ನು ಸರಿಪಡಿಸುವ ಕಾರ್ಯ ಸಹಿತ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ ಎಂದು ರೈ ಹೇಳಿದರು. ಸಮಿತಿಯ ಕೋರಿಕೆಯಂತೆ ಮಾರ್ಚ್ ತಿಂಗಳಿನಲ್ಲಿ ಕಂಬಳ ನಡೆಸಲು ಅವಕಾಶ ನೀಡಿದ ಜಿಲ್ಲಾ ಕಂಬಳ ಸಮಿತಿ ಮತ್ತು ಕಂಬಳದ ಯಶಸ್ವಿಗಾಗಿ ತೊಡಗಿಸಿಕೊಂಡಿರುವ ಸರ್ವಜನತೆಗೆ ಅಭಿನಂದನೆ ಸಲ್ಲಿಸಿದ ರಮಾನಾಥ ರೈ, ಸರ್ವ ಕಂಬಳಾಭಿಮಾನಿಗಳು ಕಂಬಳಕೂಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಈ ಬಾರಿ ಕಂಬಳ ಕೂಟವನ್ನು ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದ್ದು ಊರಿನ ಜನತೆಗೆ ಹಬ್ಬವಾಗಿ-ಉತ್ಸವವಾಗಿ ಮೂಡಿಬರಲಿದೆ. ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರ ಭಾಗವಹಿಸುವಿಕೆಯೊಂದಿಗೆ ಚಿತ್ರ ತಾರೆಯರು ಕಂಬಳಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ. ಎಂದು ರೈ ಹೇಳಿದರು.

   *200 ಜೋಡಿ ಕೋಣಗಳ ನಿರೀಕ್ಷೆ: ಪಿಯೂಸ್ ಎಲ್.ರೋಡ್ರಿಗಸ್*                                               ನಾವೂರ ಗ್ರಾಮದ ಕೂಡಿಬೈಲಿನ‌ ಗದ್ದೆಯ ಯಜಮಾನರು, ಗ್ರಾಮಸ್ಥರು ಕಂಬಳಕ್ಕೆ ಪೂರ್ಣ ಸಹಕಾರ ನೀಡಿದ್ದಾರೆ. ಕಳೆದ ಬಾರಿಯ ಸಣ್ಣಪುಟ್ಟ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಸಿದ್ಧತೆ ನಡೆಸಲಾಗುತ್ತಿದೆ. ಸುಮಾರು 200 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಹೇಳಿದರು.

ನೀರು, ನೆರಳಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆಯಲ್ಲಿ ಈ ಬಾರಿ ಮತ್ತಷ್ಟು ಸುಧಾರಣೆಗಳನ್ನು ನಡೆಸಲಾಗುತ್ತಿದೆ. ಊರಿನ ಜಾತ್ರೆಯಂತೆ “ಬಂಟ್ವಾಳ ಕಂಬಳ” ಶೋಭಿಸಲಿದೆ ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ, ಕಂಬಳದ ಪ್ರಧಾನ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು ಹೇಳಿದರು.

0


ಸಮಿತಿ ಸಂಚಾಲಕ ಬಿ. ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದಾಧಿಕಾರಿಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಎಂ.ಎಸ್.ಮಹಮ್ಮದ್, ಪದ್ಮನಾಭ ರೈ, ಅವಿಲ್ ಮೆನೇಜಸ್, ಸುಭಾಶ್ಚಂದ್ರ ಶೆಟ್ಟಿ, ಉಮೇಶ್ ಕುಲಾಲ್, ದೇವಿಪ್ರಸಾದ್ ಪೂಂಜ, ಸದಾಶಿವ ಬಂಗೇರ, ರಮೇಶ್ ನಾಯಕ್ ರಾಯಿ, ಜಗದೀಶ ಕೊಯಿಲ, ನವಾಜ್ ಬಡಕಬೈಲು, ಶಬೀರ್ ಸಿದ್ಧಕಟ್ಟೆ, ವಾಸು ಪೂಜಾರಿ, ಸಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ಸುರೇಶ್ ಪೂಜಾರಿ ಜೋರಾ, ವಲೇರಿಯನ್ ಡೆಸಾ, ಜಾನ್ ಸಿರಿಲ್ ಡಿಸೋಜ, ಬಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಕಂಬಳದ ಕೋಣದ ಯಜಮಾನರಿಗೆ ಆಹ್ವಾನಿಸುವ ಅಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ವರದಿ: ಗೋಪಾಲ ಅಂಚನ್ ಆಲದಪದವು ಸಂಪಾದಕರು: ಯುವಧ್ವನಿ ನ್ಯೂಸ್ ಕರ್ನಾಟಕ. ಮೊಬೈಲ್: 9449104318