ಮಾವಿನಕಟ್ಟೆ-ಕೊರಗಟ್ಟೆ ರಸ್ತೆಯಲ್ಲಿ ನಿಧಾನಗತಿಯ ಕಾಮಗಾರಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ, ಜಿಲ್ಲಾಧಿಕಾರಿಗೆ ದೂರು

ವಾಮದಪದವು: ಬಂಟ್ವಾಳ ತಾಲೂಕಿನ ಮಾವಿನಕಟ್ಟೆ-ಕೊರಗಟ್ಟೆ-ಪಾಂಗಲ್ಪಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಭಾಗಶ: ರಸ್ತೆಯು ಕಾಂಕ್ರೀಟಿಕರಣಗೊಳ್ಳುತ್ತಿದ್ದು ಆದರೆ ನಿಧಾನಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಕಾಮಗಾರಿಯನ್ನು ಶೀರ್ಘ ಪೂರ್ಣಗೊಳಿಸುವಂತೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ.

ಬಂಟ್ವಾಳ ತಾಲೂಕಿನ ಮಾವಿನಕಟ್ಟೆ-ಕೊರಗಟ್ಟೆ-ಪಾಂಗಲ್ಪಾಡಿ ರಸ್ತೆಯು ಬಹುಪಯೋಗಿ ರಸ್ತೆಯಾಗಿದ್ದು ಹಲವು ಊರುಗಳನ್ನು ಸಂಪರ್ಕಿಸುತ್ತಿದೆ. ಎರಡು ಖಾಸಗಿ ಬಸ್ಸುಗಳು, ಶಾಲಾ ಬಸ್ಸುಗಳ ಸಹಿತ ನೂರಾರು ವಾಹನಗಳು ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಿದೆ. ನಿತ್ಯ ಕೆಲಸ, ಶಿಕ್ಷಣ ಮತ್ತು ವ್ಯವಹಾರಕ್ಕಾಗಿ ಹತ್ತಾರು ಹಳ್ಳಿಗಳ ಜನರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಇದೀಗ ಈ ರಸ್ತೆಯ ಮುರದಮೇಲು-ಗೋಂಜ ಭಾಗದ 400 ಮೀ.ರಸ್ತೆಯು ಕಾಂಕ್ರೀಟಿಕರಣಗೊಳ್ಳುತ್ತಿದೆ. ಕಾಂಕ್ರೀಟಿಕರಣಕ್ಕಾಗಿ ಒಂದು ವಾರ ಕಾಲ ರಸ್ತೆಯನ್ನು ಅಗೆಯುವ ಕಾಮಗಾರಿಯಷ್ಟೇ ನಡೆದಿದೆ. ಕೇವಲ ಒಂದು ಜೆಸಿಬಿಯನ್ನು ಬಳಸಿ ವಾರವಿಡೀ ರಸ್ತೆಯನ್ನು ಅಗೆಯುವ ಕೆಲಸವನ್ನಷ್ಟೇ ಮಾಡಲಾಗಿದೆ. ಇದೀಗ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ರಸ್ತೆಯಲ್ಲಿ ಸಂಚರಿಸುವುದು ಅಸಾಧ್ಯವಾಗಿದೆ. ನಿತ್ಯ ಸಂಚಾರಕ್ಕಾಗಿ ಇದೇ ರಸ್ತೆಯನ್ನು ಅವಲಂಬಿಸಿದ ಗ್ರಾಮೀಣ ಭಾಗದ ಜನತೆಗೆ ತೀವ್ರ ಸಂಕಷ್ಟ ಎದುರಾಗಿದೆ. ಪರ್ಯಾಯ ಸಂಚಾರ ವ್ಯವಸ್ಥೆಯೂ ಇಲ್ಲದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರಸ್ತೆಯನ್ನು ಅಗೆದು ಹಾಕಲಾಗಿದೆ, ಆದರೆ ಕಾಂಕ್ರೀಟಿಕರಣಕ್ಕೆ ಬೇಕಾದ ಯಾವುದೇ ಪೂರ್ವಭಾವಿ ಸಿದ್ಧತೆಗಳು ನಡೆದಿಲ್ಲ, ಕನಿಷ್ಠ ಜಲ್ಲಿ ಹಾಕಿ ಸಮತಟ್ಟು ಮಾಡುವ ಕಾರ್ಯವೂ ನಡೆದಿಲ್ಲ. ಇದೇ ರೀತಿ ವಿಳಂಬವಾದರೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ದಿನ ಬೇಕಾದೀತು? ಅದುವರೆಗೆ ಜನರು ಸಂಚಾರ ನಡೆಸುವುದು ಹೇಗೆ? ಎಂಬ ಆತಂಕ ಎದುರಾಗಿದ್ದು ಕಾಮಗಾರಿ ಶೀರ್ಘವಾಗಿ ಪೂರ್ಣಗೊಳಿಸಬೇಕೆಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ರಸ್ತೆ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಎದುರಾಗಿರುವ ತೊಂದರೆ ಬಗ್ಗೆ ಈಗಾಗಲೇ ನಾಗರಿಕರ ಪರವಾಗಿ ಚೆನ್ನೈತ್ತೋಡಿ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಯತೀಶ್ ಎಂ.ಶೆಟ್ಟಿ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು ಕಾಮಗಾರಿ ಶೀರ್ಘವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಸ್ತೆ ಕಾಮಗಾರಿಯ ನಿಧಾನಗತಿಯಿಂದಾಗಿ ಸಾರ್ವಜನಿಕರಿಗೆ ಆಗುವ ತೊಂದರೆಯ ಬಗ್ಗೆ ಗ್ರಾಮಸ್ಥರು ಚೆನ್ನೈತ್ತೋಡಿ ಗ್ರಾಮ ಪಂಚಾಯತು ಗ್ರಾಮ ಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಮಗಾರಿಯನ್ನು ಶೀರ್ಘ ಪೂರ್ಣಗೊಳಿಸಬೇಕಾಗಿದೆ.ತಪ್ಪಿದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಸಾಧ್ಯತೆಯೂ ಹೆಚ್ಚಿದೆ.

ವರದಿ: ಗೋಪಾಲ ಅಂಚನ್ ಸಂಪಾದಕರು: ಯುವಧ್ವನಿ ನ್ಯೂಸ್, ಕರ್ನಾಟಕ. ಮೊ:9449104318