ಬಂಟರ ಸಂಘ ವಾಮದಪದವು ವಲಯ-ಪದವು ಬಂಟರ ಭವನಕ್ಕೆ ಶಿಲಾನ್ಯಾಸ

ಬಂಟ್ಚಾಳ: ತಾಲೂಕಿನ ವಾಮದಪದವು ವಲಯ ಬಂಟರ ಸಂಘದ ವತಿಯಿಂದ ಆಲದಪದವಿನ ನಿವೇಶನದಲ್ಲಿ ನಿರ್ಮಿಸಲು ಉದ್ಧೇಶಿಸಿರುವ 2ಕೋಟಿ ರೂಪಾಯಿ ಅಂದಾಜು ವೆಚ್ಚದ “ಪದವು ಬಂಟರ ಭವನ” ದ ಶಿಲಾನ್ಯಾಸ ಸಮಾರಂಭವು ಗುರುವಾರ ನಡೆಯಿತು.
ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಬಂಟ ಸಮುದಾಯವು ಇತ್ತೀಚೆಗೆ ಜಾಗೃತಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಬಂಟರ ಭವನ ನಿರ್ಮಾಣದೊಂದಿಗೆ ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿಯೂ ಬಂಟರ ಸಂಘವು ವಿಶೇಷ ಆಧ್ಯತೆ ನೀಡಬೇಕಾಗಿದೆ ಎಂದರು.

ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸೇವೆಯ ಮೂಲಕ ಬದುಕಿನ ಸಾರ್ಥಕತೆಯನ್ನು ಕಾಣುವಲ್ಲಿ ಬಂಟ ಸಮುದಾಯವು ಮುಂಚೂಣಿಯಲ್ಲಿದೆ. ನಾಯಕತ್ವ, ಕ್ರಿಯಾಶೀಲತೆ, ಸಂಘಟನೆ, ದಾನಶೀಲತೆಗೆ ಮತ್ತೊಂದು ಹೆಸರೇ ಬಂಟ ಸಮುದಾಯ. ಇದನ್ನು ಉಳಿಸಿ ಬೆಳೆಸುವಲ್ಲಿ ಬಂಟ ಸಮುದಾಯ ವಿಶೇಷ ಮುತುವರ್ಜಿ ವಹಿಸಬೇಕಾಗಿದೆ ಎಂದರು.

ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ ನಾವು ಸಮಾಜಕ್ಕೆ ದೊಡ್ಡದಾದ ಕೊಡುಗೆ ನೀಡುವ ಮೂಲಕ ದೊಡ್ಡವರಾಗಬೇಕು. ಬಂಟ ಸಮಾಜ ಎಲ್ಲಾ ಕ್ಷೇತ್ರಗಳಿಗೂ ದೊಡ್ಡದಾದ ಕೊಡುಗೆ ನೀಡಿದೆ. ಈ ಸಮಾಜ ದೇಶಕ್ಕೆ ದೊಡ್ಡದಾದ ಕೊಡುಗೆ ನೀಡುವ ಸಮಾಜವಾಗಿ ಬೆಳೆಯಬೇಕಾಗಿದೆ ಎಂದರು. ಬೆಂಗಳೂರಿನ ಎಂ.ಆರ್.ಜಿ.ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಬಂಜಾರ ದೀಪ ಪ್ರಜ್ವಲಿಸಿ ಮಾತನಾಡಿ ಬಂಟನೆನ್ನುವುದು ನಮಗೆ ಹೆಮ್ಮೆಯಾಗಬೇಕು. ನಾವು ಸನ್ಮಾರ್ಗದಲ್ಲಿ ಸಂಪಾದಿಸಿ ಅದರ ಒಂದಷ್ಟನ್ನು ಸಮಾಜದ ಏಳಿಗೆಗಾಗಿ ನೀಡಬೇಕು, ಆರ್ಥಿಕ ಹಿಂದುಳಿದವರ ಏಳಿಗೆಗಾಗಿ ನಾವು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.

ವಾಮದಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟರ ಸಂಘ ಬಂಟ್ವಾಳದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ವಾಮದಪದವು ವಲಯ ಬಂಟರ ಸಂಘದ ಗೌರವಾಧ್ಯಕ್ಷ ಅಮ್ಮು ರೈ ಹರ್ಕಾಡಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡಾ, ರಾಜೇಂದ್ರ ಶೆಟ್ಟಿ ಹುಬ್ಬಳ್ಳಿ, ಉಪೇಂದ್ರ ಶೆಟ್ಟಿ ಬೆಂಗಳೂರು, ವಿಶ್ವನಾಥ ಶೆಟ್ಟಿ ಕರ್ನಿರೆ, ಶಶಿಧರ ನಾಯ್ಕ ಗೋವಾ, ರಮೇಶ ಶೆಟ್ಟಿ ಗೋವಾ, ಸುಚರಿತ ಶೆಟ್ಟಿ, ಜಗನ್ನಾಥ ಚೌಟ ಬದಿಗುಡ್ಡೆ, ಜಯರಾಮ ಶೆಟ್ಟಿ ಬೆಳ್ತಂಗಡಿ, ಶ್ರೀಧರ ಶೆಟ್ಟಿ ಮೇಗಿನಗುತ್ತು, ಸುಧಾಕರ ಪೂಂಜ ಸುರತ್ಕಲ್, ಪ್ರವೀಣ್ ಶೆಟ್ಟಿ ಮುಂಬೈ, ಜಗನ್ನಾಥ ಶೆಟ್ಟಿ ಮುಂಬೈ, ಭಾರತಿ ರಾಜೇಂದ್ರ, ರಮಾ ಎಸ್.ಭಂಡಾರಿ, ಶಾಲಿನಿ ಶ್ರೀಧರ್ ಶೆಟ್ಟಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ನಿಶಾಂತ್ ಆಳ್ವ, ಜಯಪ್ರಕಾಶ್ ಶೆಟ್ಟಿ ಬುಳೇರಿ, ಚೇತನಾ ರಾಮಚಂದ್ರ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಾಮದಪದವು ವಲಯ ಬಂಟರ ಸಂಘದ ಗೌರವ ಸಲಹೆಗಾರ ಅಶೋಕ ಪಕ್ಕಳ ಶ್ರೀಸನ್ನಿಧಿಗುತ್ತು ಸ್ವಾಗತಿಸಿದರು. ಕಿಶೋರ್ ಕುಮಾರ್ ಭಂಡಾರಿ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು. ರಮೇಶ ಶೆಟ್ಟಿ ವಾಮದಪದವು ವಂದಿಸಿದರು.
ಶಿಲಾನ್ಯಾಸಕ್ಕೆ ಮುನ್ನ ಭರತನಾಟ್ಯ ಕಾರ್ಯಕ್ರಮ, ಸಭಾ ಕಾರ್ಯಕ್ರಮದ ಬಳಿಕ ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಮತ್ತಿತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ ನಡೆಯಿತು.

ವರದಿ: ಗೋಪಾಲ ಅಂಚನ್