ಡಿ.31ರಂದು ಸಿದ್ಧಕಟ್ಟೆ ಸಹಕಾರಿ ಸಂಘದ ಅಮೃತ ಮಹೋತ್ಸವ, ವೀರ ಸಾವರ್ಕರ್ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ

ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯ ಹಿನ್ನಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪಿದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಹೆಸರಿನಲ್ಲಿ ನಿರ್ಮಿಸಲಾದ “ವೀರ ಸಾವರ್ಕರ್ ವಾಣಿಜ್ಯ ಸಂಕೀರ್ಣ”ವು ಡಿ.31ರಂದು ಲೋಕಾರ್ಪಣೆಗೊಳ್ಳಲಿದೆ.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ನೂತನ ವೀರ ಸಾವರ್ಕರ್ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸುವರು ಎಂದು ಸಿದ್ಧಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ ಪ್ತಭಾಕರ ಪ್ರಭು ತಿಳಿಸಿದ್ದಾರೆ.
ಬುಧವಾರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕಾ ಸಂಘವು 1947ರಲ್ಲಿ ಬಿ.ಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿದ್ದು ಇದೀಗ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಸಂಘದ ವತಿಯಿಂದ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು. ಸಂಘದ ಅಮೃತ ಮಹೋತ್ಸವವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಉದ್ಘಾಟಿಸುವರು. ನೇತಾಜಿ ಬಹುಪಯೋಗಿ ಸೇವಾ ಕೇಂದ್ರವನ್ನು ಸಂಸದ ನಳಿನ್ ಕುಮಾರ್ ಕಟೀಲು, ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ನವೀಕೃತ ಕಛೇರಿಯನ್ನು ಸಹಕಾರ ಭಾರತಿ ಕರ್ನಾಟಕ ರಾಜ್ಯದ ಅಧ್ಯಕ್ಷ ರಾಜಶೇಖರ ಶೀಲವಂತ ಬಾಗಲಕೋಟೆ ಉದ್ಘಾಟಿಸಲಿದ್ದಾರೆ ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು ನಿರ್ದೇಶಕ ಟಿ.ಜಿ.ರಾಮ್ ಭಟ್ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಿದ್ದಾರೆ ಎಂದು ಪ್ರಭಾಕರ ಪ್ರಭು ವಿವರಿಸಿದರು.


ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿವೃತ್ತ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು.
ಸಂಘದ ಅಮೃತ ಮಹೋತ್ಸವದ ಪ್ರಯುಕ್ತ ಕಿಸಾನ್ ಕ್ರೆಡಿಟ್ ಕಾಡ್ ೯ ಸಹಿತ ಬೆಳೆ ಸಾಲ, ಕೃಷಿ ಅಭಿವೃದ್ದಿ ಸಾಲ, ಅಡವು ಸಾಲ, ಜಾಮೀನು ಸಾಲ ಸೇರಿದಂತೆ ಈ ವರ್ಷ ಈಗಾಗಲೇ 75 ಕೋಟಿಗೂ ಅಧಿಕ ಸಾಲ ನೀಡಲಾಗಿದ್ದು ಆರ್ಥಿಕ ವರ್ಷ ಅಂತ್ಯಕ್ಕೆ 100 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಭು ಹೇಳಿದರು. 2023ರೊಳಗೆ ದೇಶದಾದ್ಯಂತ 35 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಕೇಂದ್ರ ಸರಕಾರ ನಬಾಡ್೯ ಸಹಕಾರದಲ್ಲಿ ಶೇ.1ರಷ್ಟು ದರದಲ್ಲಿ ವಿಶೇಷ ದೀರ್ಘಾವಧಿಯ ಮರು ಹಣಕಾಸು ಸಾಲ ಸೌಲಭ್ಯವನ್ನು ನೀಡುತ್ತಿದ್ದು ಈ ಯೋಜನೆ ಸಹಕಾರ ಸಂಘಗಳು ಸಕ್ರಿಯವಾಗಲು ಕಾರಣವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರವರನ್ನು ಎಲ್ಲಾ ಸಹಕಾರಿ ಸಂಘಗಳ ಪರವಾಗಿ ಅಭಿನಂದಿಸುವುದಾಗಿ ಪ್ರಭು ಹೇಳಿದರು. ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ, ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ದಿನೇಶ್ ಪೂಜಾರಿ ಹುಲಿಮೇರು, ಉಮೇಶ್ ಗೌಡ ಮಂಚಕಲ್ಲು, ಜಾರಪ್ಪ ನಾಯ್ಕ, ವೀರಪ್ಪ ಪರವ, ದೇವರಾಜ ಸಾಲ್ಯಾನ್, ಮಾಧವ ಶೆಟ್ಟಿಗಾರ್,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರತಿ ಶೆಟ್ಟಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ, ಶಾಖಾ ಪ್ರಬಂಧಕರಾದ ಸಚಿನ್ ಜೈನ್, ಜೇಸನ್ ಫೆರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ:ಗೋಪಾಲ ಅಂಚನ್