ಡಿಸೆಂಬರ್ 13ರಂದು ಓಜಾಲದಲ್ಲಿ 16ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ಬಂಟ್ವಾಳ: “ಮಕ್ಕಳ ಕಲಾಲೋಕ” ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ವತಿಯಿಂದ 16 ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವು ಡಿ13ರಂದು ಓಜಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಮಕ್ಕಳ ಕಲಾಲೋಕದ ಅಧ್ಯಕ್ಷ ರಮೇಶ ಎಂ.ಬಾಯಾರು ತಿಳಿಸಿದ್ದಾರೆ. ವಿಟ್ಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಣ ಇಲಾಖೆ, ಇಡ್ಕಿದು ಗ್ರಾಮ ಪಂಚಾಯತು, ಓಜಾಲ ಶಾಲಾ ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಓಜಾಲ ಶಾಲಾ ಆರನೇ ತರಗತಿ ವಿದ್ಯಾರ್ಥಿನಿ ಶ್ರುತಿಕಾ ಸಮ್ಮೇಳನಾಧ್ಯಕ್ಷತೆ ವಹಿಸುವರು ಎಂದರು. 15ನೇ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ, ವಿಠಲ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಬಿ.ಸಮ್ಮೇಳನ ಉದ್ಘಾಟಿಸುವರು. ಪುತ್ತೂರು ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ ಧನ್ವಿ ರೈ ಕೋಟೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ರಮೇಶ ಎಂ.ಬಾಯಾರು ತಿಳಿಸಿದರು.

ಹದಿನೆಂಟು ವರ್ಷದೊಳಗಿನ ಸುಮಾರು 400 ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಇದರೊಂದಿಗೆ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ದಿನವಿಡೀ ನಡೆಯುವ ಸಮ್ಮೇಳನದ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ಸ್ವಾಗತ, ಧನ್ಯವಾದ, ನಿರ್ವಹಣೆ, ಗೋಷ್ಠಿಗಳ ಅಧ್ಯಕ್ಷತೆಯನ್ನು ನಿರ್ವಹಿಸಲಿದ್ದಾರೆ. ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿಯವರ ಗೌರವಾಧ್ಯಕ್ಷತೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಬಿ.ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಸಹಿತ ಇತರ ಉಪಸಮಿತಿಗಳನ್ನು ರಚಿಸಲಾಗಿದ್ದು ಮಕ್ಕಳ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸರ್ವರೂ ಕೈಜೋಡಿಸಬೇಕಾಗಿದೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಚಿದಾನಂದ ಪೆಲತ್ತಿಂಜ ಹೇಳಿದರು. ಸಾಹಿತ್ಯ ರಚನೆ, ಆಶು ಮಾತುಕತೆ, ಚಿತ್ತ ಚಿತ್ತಾರ, ಕಿರುನಾಟಕಗಳನ್ನು ಸಮ್ಮೇಳನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಬೆಳಿಗ್ಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಪರಿಷತ್ ಧ್ವಜಾರೋಹಣ ಮತ್ತು ಚಿದಾನಂದ ಪೆಲತ್ತಿಂಜ ಕನ್ನಡ ಧ್ವಜಾರೋಹಣ ನೆರವೇರಿಸುವರು. ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಕುಂಬಳೆ ಮಕ್ಕಳ ಸ್ವರಚಿತ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡುವರು. ಸಂಜೆ ಸಮಾರೋಪ ಸಮಾರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಭಾಗವಹಿಸಲಿದ್ದು ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಲಾವಣ್ಯ ಸಮಾರೋಪ ಭಾಷಣ ಮಾಡುವರು. ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳ ಸಂಖ್ಯೆಯನ್ನು ಶಾಲೆಯ ಹೆಸರು ಸಹಿತ 9449817428 ಸಂಖ್ಯೆಗೆ ಸಮ್ಮೇಳನಕ್ಕೆ ನಾಲ್ಕು ದಿನ ಮುಂಚಿತವಾಗಿ ತಿಳಿಸಿ ಸಮ್ಮೇಳನದ ವ್ಯವಸ್ಥೆಗೆ ಸಹಕರಿಸಬೇಕು ಎಂದು ಓಜಾಲ ಶಾಲಾ ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ ಹೇಳಿದರು. ಮಕ್ಕಳ ಕಲಾಲೋಕದ ಕಾರ್ಯದರ್ಶಿ ಶಿವರಾಮ ಭಟ್ ನೆಡ್ಲೆ, ಉಪಾಧ್ಯಕ್ಷೆ ವಿಲ್ಮಾ ಸಿಕ್ವೇರಾ, ಸ್ವಾಗತ ಸಮಿತಿಯ ಕೋಶಾಧಿಕಾರಿ ಸುಮಯ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ: ಗೋಪಾಲ ಅಂಚನ್