ಐದು ತರಗತಿಯಲ್ಲಿ 9 ಮಕ್ಕಳು, ಒಬ್ಬರು ಶಿಕ್ಷಕರು ಇದು ಪಿಲಾತಬೆಟ್ಟು ಗ್ರಾಮದ ನೇರಳಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ, ಎದುರಾಗಿದೆ ಮುಚ್ಚುವ ಭೀತಿ

.ವಾಮದಪದವು: ಐದು ತರಗತಿಯಲ್ಲಿ 9 ಮಕ್ಕಳು, ಒಬ್ಬರು ಶಿಕ್ಷಕರು. ಇದು ಪಿಲಾತಬೆಟ್ಟು ಗ್ರಾಮದ ನೇರಳಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ. ಈ ಶಾಲೆಯಲ್ಲಿ ಎಲ್ಲವೂ ಇದೆ, ಆದರೆ ಮಕ್ಕಳಿಲ್ಲ, ಮಕ್ಕಳಿಗೆ ಬೇಕಾದಷ್ಟು ಶಿಕ್ಷಕರು ಇಲ್ಲ. ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೇರಳಕಟ್ಟೆ ದ.ಕ.ಜಿ.ಪ.ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಮತ್ತು ಶಿಕ್ಷಕರ ಕೊರತೆ,

ಎರಡನ್ನೂ ಎದುರಿಸುತ್ತಿದ್ದು ಮುಚ್ಚುವ ಭೀತಿ ಎದುರಾಗಿದೆ. ವಾಮದಪದವು-ವೇಣೂರು ರಸ್ತೆಯ ನೇರಳಕಟ್ಟೆಯಿಂದ ಒಂದಿಷ್ಟು ದೂರದಲ್ಲಿ ರಸ್ತೆಯಂಚಿನಲ್ಲೇ ಈ ಶಾಲೆ ಇದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ವೈಭವದಿಂದ ಮೆರೆದ ಈ ಶಾಲೆ ಇದೀಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವದಿಂದ ಮಕ್ಕಳ ಕೊರತೆಯನ್ನು ಎದುರಿಸುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಶಿಕ್ಷಕರ ಕೊರತೆಯೂ ಈ ಶಾಲೆಯನ್ನು ಕಾಡುತ್ತಿದೆ. ನೇರಳಕಟ್ಟೆ ಕಿರಿಯ ಪ್ರಾಥಮಿಕ ಶಾಲೆ 1987ರಲ್ಲಿ ಸ್ಥಾಪನೆಯಾಗಿದೆ.

ಸುದೀರ್ಘ ಕಾಲದ ಇತಿಹಾಸವಿರುವ ಶಾಲೆಯಲ್ಲಿ ಈಗಿರುವ ಮಕ್ಕಳ ಸಂಖ್ಯೆ ಬರೀ 9 ಮಾತ್ರ. ಈ ಒಂಬತ್ತು ಮಕ್ಕಳಿಗೆ ಭೋದಿಸಲು ಇರುವುದು ಒಬ್ಬರೇ ಶಿಕ್ಷಕಿ. ಹಾಗೆಂದು ಈ ಶಾಲೆಯಲ್ಲಿ ಮೂಲಭೂತ ವ್ಯವಸ್ಥೆಗಳಿಗೇನೂ ಕೊರತೆ ಇಲ್ಲ. ಶಾಲೆಗೆ 1.20 ಎಕರೆ ಜಮೀನಿದೆ, ಸುಸಜ್ಜಿತ ಆಟದ ಮೈದಾನವಿದೆ, ನಾಲ್ಕು ತರಗತಿ ಕೊಠಡಿಗಳಿದೆ. ಆದರೆ ಸ್ಥಳೀಯವಾಗಿ ಹುಟ್ಟಿಕೊಂಡಿರುವ ಆಂಗ್ಲ ಮಾಧ್ಯಮ ಶಾಲೆಗಳು ಮಕ್ಕಳನ್ನು ಆಕರ್ಷಿಸಿರುವುದರಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸತೊಡಗಿದೆ. ಪ್ರಸ್ತುತ ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ವಿದ್ಯಾರ್ಜನೆಗೆ ಅವಕಾಶವಿದೆ. ಆದರೆ ಈಗ ಒಂದನೇ ತರಗತಿಯಲ್ಲಿ ಮೂವರು, ಎರಡನೇ ತರಗತಿಯಲ್ಲಿ ಇಬ್ಬರು, ನಾಲ್ಕನೇ ತರಗತಿಯಲ್ಲಿ ಒಬ್ಬರು, ಐದನೇ ತರಗತಿಯಲ್ಲಿ ಮೂವರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮೂರನೇ ತರಗತಿಯಲ್ಲಿ ಒಬ್ಬರೂ ವಿದ್ಯಾರ್ಥಿಗಳಿಲ್ಲ. ಎಲ್ಲಾ ತರಗತಿಗಳು ಸೇರಿದರೆ ಇಲ್ಲಿರುವುದು ಕೇವಲ ಒಂಬತ್ತು ವಿದ್ಯಾರ್ಥಿಗಳು. ಒಬ್ಬರೇ ಶಿಕ್ಷಕರು ಈ ಶಾಲೆಗೆ ಎರಡು ಶಿಕ್ಷಕರ ಹುದ್ದೆ ಮಂಜೂರಾಗಿದೆ. ಆದರೆ ಈಗ ನವೀನ ಕುಮಾರಿ ಎಂಬವರು ನಿಯೋಜನೆ ನೆಲೆಯಲ್ಲಿ ಏಕೈಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಆಟ-ಪಾಠ-ಊಟದ ವ್ಯವಸ್ಥೆ, ಶಾಲಾ ದಾಖಲಾತಿಗಳ ನಿರ್ವಹಣೆ, ಇಲಾಖಾ ಕಾರ್ಯ-ಮೀಟಿಂಗ್ ಇತ್ಯಾದಿಗಳೆಲ್ಲವನ್ನೂ ಒಬ್ಬರೇ ಶಿಕ್ಷಕಿ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ. ಗೆಸ್ಟ್ ಟೀಚರ್ಸ್ ಗಳನ್ನಾದರೂ ನೇಮಿಸುವುದು ಇಲ್ಲಿನ ತುರ್ತು ಅಗತ್ಯವಾಗಿದೆ. ಶಾಲಾ ಆಟದ ಮೈದಾನದಲ್ಲಿ ಹುಲ್ಲು ಬೆಳೆದಿದ್ದು ಅದನ್ನು ತೆರವುಗೊಳಿಸುವ ಅಗತ್ಯವಿದೆ. ದೇವದಾಸ್ ಹೆಗ್ಡೆ ಅಧ್ಯಕ್ಷತೆಯ ಶಾಲಾಭಿವೃದ್ಧಿ ಸಮಿತಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಮಿತಿ ಶಾಲಾಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರೂ ಮಕ್ಕಳು ಮತ್ತು ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ. “ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವದಿಂದ ಇಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ವರ್ಷಕ್ಕೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ” ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವದಾಸ್ ಹೆಗ್ಡೆ. ಹೌದು…ನೇರಳಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮುಚ್ಚುವ ಭೀತಿ ಎದುರಾಗಿದೆ. ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ, ಶಾಲಾಭಿವೃದ್ಧಿ ಸಮಿತಿ ಹಾಗೂ ಸಮುದಾಯ ಈ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ತುರ್ತು ಕಾರ್ಯೋನ್ಮುಖವಾಗಬೇಕಾಗಿದೆ.

ಲೇಖನ: ಗೋಪಾಲ ಅಂಚನ್, ಆಲದಪದವು