ವಾಮದಪದವು: “ಎ” ಗ್ರೇಡ್ ಕಬಡ್ಡಿ ಪಂದ್ಯಾಟ ಆಮಂತ್ರಣ ಪತ್ರಿಕೆ ಬಿಡುಗಡೆ

ಯುವಧ್ವನಿ ನ್ಯೂಸ್ ಕರ್ನಾಟಕ

ವಾಮದಪದವು: ಯೂತ್ ಫ್ರೆಂಡ್ಸ್ ವಾಮದಪದವು ಆಶ್ರಯದಲ್ಲಿ ಡಿ.17 ರಂದು ವಾಮದಪದವು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯುವ “ಎ” ಗ್ರೇಡ್ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಭಾನುವಾರ ಸಂಜೆ ಬಿಡುಗಡೆಗೊಂಡಿತು.

ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವುದು ಶ್ಲಾಘನೀಯ ಅಂಶವಾಗಿದೆ. ಇದರ ಯಶಸ್ವಿಗೆ ಸರ್ವರೂ ಸಹಕಾರ ನೀಡಬೇಕಾಗಿದೆ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ದಕ್ಷಿಣಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ವಾಮದಪದವಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ಪ್ರೋ ಕಬಡ್ಡಿ ಆಟಗಾರರ ಭಾಗವಹಿಸುವಿಕೆಯೊಂದಿಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ತಲಾ 6 ತಂಡಗಳಂತೆ ಒಟ್ಟು ಹನ್ನೆರಡು ತಂಡಗಳ “ಎ” ಗ್ರೇಡ್ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಕಬಡ್ಡಿ ಯಶಸ್ವಿಗಾಗಿ ಸಕಲ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಯೂತ್ ಫ್ರೆಂಡ್ಸ್ ಅಧ್ಯಕ್ಷ ನಿತಿನ್ ಶೆಟ್ಟಿ ಮೂರ್ಜೆ ತಿಳಿಸಿದರು. ಯೂತ್ ಫ್ರೆಂಡ್ಸ್ ಗೌರವಾಧ್ಯಕ್ಷ ಜಯಚಂದ್ರ ಬೊಳ್ಮಾರು, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಮಲ್ ಶೆಟ್ಟಿ ಬೊಳ್ಳಾಜೆ, ನಿರ್ದೇಶಕ ನಾಗರಾಜ ಶೆಟ್ಟಿ, ಪತ್ರಕರ್ತ ಗೋಪಾಲ ಅಂಚನ್, ಕಬಡ್ಡಿ ಸಂಘಟಕರಾದ ರಮೇಶ್ ನಾಯ್ಕ್ ಪರಾರಿ, ಅಶ್ವಿನ್ ಆಲದಪದವು, ಸೌಕತ್ ಅಲಿ ಆಲದಪದವು, ಸಾಗರ್ ವಾಮದಪದವು, ಪ್ರಕಾಶ್ ಪೂಜಾರಿ ಪಾಲೆದಡಿ ಮೊದಲಾದವರಿದ್ದರು.

ವರದಿ: ಗೋಪಾಲ ಅಂಚನ್, ಆಲದಪದವು