ಗುಬ್ಬಚ್ಚಿ ಗೂಡು ಮನೆಯಲ್ಲಿ ಮಕ್ಕಳಿಗೆ, ಯುವಕರಿಗೆ ಅಡಿಕೆ ಸಿಪ್ಪೆ ಸುಲಿಯುವ ವಿನೂತನ ತರಬೇತಿ

ಯುವಧ್ವನಿ ನ್ಯೂಸ್ ಕರ್ನಾಟಕ

ವಾಮದಪದವು: ಕೃಷಿ ಕಸುಬುಗಳ ಕೌಶಲ್ಯವನ್ನು ಕಲಿಯುವ ಮೂಲಕ ಗ್ರಾಮೀಣ ಭಾಗದ ಯುವಜನತೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎನ್ನುವ ಸದುದ್ಧೇಶದಿಂದ ಅಡಿಕೆ ಸಿಪ್ಪೆ ಸುಲಿಯುವ ವಿನೂತನ ತರಬೇತಿ ಕಾರ್ಯಕ್ರಮವೊಂದು ಭಾನುವಾರ ವಾಮದಪದವು ಸಮೀಪದ ಮಾವಿನಕಟ್ಟೆಯಲ್ಲಿ ನಡೆಯಿತು.


ಹಲವು ವರ್ಷದಿಂದ ಪಕ್ಷಿಗಳ ಸಂರಕ್ಷಣೆಗಾಗಿ ಜಾಗೃತಿ ಅಭಿಯಾನವನ್ನು ನಡೆಸಿಕೊಂಡು ಬಂದಿರುವ ಗುಬ್ಬಚ್ಚಿ ಗೂಡು ಬಳಗ ಈ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು ಕೃಷಿಕರ ಮೆಚ್ಚುಗೆಗೆ ಪಾತ್ರವಾಯಿತು.
ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ಬದ್ಯಾರು ಗುಬ್ಬಚ್ಚಿ ಗೂಡು ಮನೆಯಲ್ಲಿ “ನಿತ್ಯರಮ್ಯ ಜೀವನ ಶಾಲೆ” ಎಂಬ ಬ್ಯಾನರಿನಡಿ ” ಬದಲಾಗಲಿ ಮನ-ಬರಡಾಗದಿರಲಿ ಜೀವನ” ಎಂಬ ಘೋಷಣೆಯೊಂದಿಗೆ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇಂದಿನ ಮಕ್ಕಳು ವೈಟ್ ಕಾಲರ್ ಜಾಬ್ ನತ್ತ ಆಕರ್ಷಿತರಾಗುತ್ತಿರುವುದು, ಯುವಕರು ಉದ್ಯೋಗಕ್ಕಾಗಿ ನಗರದತ್ತ ವಲಸೆ ಹೋಗುವುದು, ಗ್ರಾಮೀಣ ಭಾಗದ ಜನರು ಕೃಷಿಯಿಂದ ವಿಮುಖರಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರ ಮತ್ತು ಕೃಷಿ ಪೂರಕ ಕಸುಬಿನ ಮಹತ್ವದ ಬಗ್ಗೆ ಯುವಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪರಿಸರದ ಶಾಲಾ ಕಾಲೇಜುಗಳ ಮಕ್ಕಳು ಮತ್ತು ಗ್ರಾಮೀಣ ಭಾಗದ ಯುವಕರು ಈ ತರಬೇತಿಯಲ್ಲಿ ಪಾಲ್ಗೊಂಡರು, ಸಿಪ್ಪೆ ಸುಲಿಯುವ ವಿಧಾನವನ್ನು ಕಲಿತರು. ಇದೇ ಸಂದರ್ಭ ಯುವಜನತೆಗೆ ಪ್ರೇರಣೆ ನೀಡುವ ದೃಷ್ಠಿಯಿಂದ ಕೃಷಿ ಕ್ಷೇತ್ರದ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು, ಅವರಿಂದ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.


ಮುಂದಿನ ದಿನಗಳಲ್ಲಿ ಮಕ್ಕಳಿಗೆ ಮತ್ತು ಯುವಕರಿಗೆ ಅಡಿಕೆ ಮತ್ತು ತೆಂಗಿನ ಸಿಪ್ಪೆ ಸುಲಿಯುವ ವಿಧಾನ, ಹುಲ್ಲು ಕಟಾವು, ನೇಜಿ ನಾಟಿ, ಭತ್ತ ಬೇಸಾಯ, ಹೈನುಗಾರಿಕೆ, ತರಕಾರಿ ಕೃಷಿಯ ಬಗ್ಗೆ ಮಾಹಿತಿ-ತರಬೇತಿ ನೀಡಲು ಗುಬ್ಬಚ್ಚಿ ಗೂಡು ಬಳಗ ಯೋಜನೆ ರೂಪಿಸಿದೆ. ಕೃಷಿ ಪೂರಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕವೂ ಯುವಕರು ಸ್ವಾವಲಂಬಿ ಬದುಕು ನಡೆಸಬಹುದು ಎನ್ನುವ ಆಶಯ ಈ ಯೋಜನೆಯ ಮುಂದಿದೆ

“ಗ್ರಾಮೀಣ ಭಾಗದ ಯುವಕರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ, ಎಲ್ಲರೂ ವೈಟ್ ಕಾಲರ್ ಜಾಬ್ ನತ್ತ ಆಕರ್ಷಿತರಾದರೆ ಕೃಷಿ ಕಸುಬು ಮಾಡುವವರು ಯಾರು ಎಂಬ ಪ್ರಶ್ನೆ ಕೃಷಿ ವಲಯವನ್ನು ಕಾಡತೊಡಗಿದೆ. ಅದ್ದರಿಂದ ಮಕ್ಕಳು ಮತ್ತು ಯುವಕರಿಗೆ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಹುಟ್ಟಿಸುವು ದು ಮತ್ತು ಕೃಷಿ ಕಸುಬಿನ ಕೌಶಲ್ಯಗಳನ್ನು ತಿಳಿಯ ಪಡಿಸುವ ಉದ್ಧೇಶದಿಂದ ಈ ಪ್ರಯತ್ನವನ್ನು ನಡೆಸಲಾಗಿದೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದು ನಿರಂತರ ಮುಂದುವರಿಯಲಿದೆ.” -ನಿತ್ಯಾನಂದ ಶೆಟ್ಟಿ ನಿತ್ಯರಮ್ಯ ಜೀವನ ಪಾಠ ಶಾಲೆಯ ರೂವಾರಿ.
………….
ಲೇಖನ:
ಆಲದಪದವು ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊಬೈಲ್:
9449104318