ನವಂಬರ್ 12, 13ರಂದು ಅಮ್ಮುಂಜೆ ಶಾಲೆಯಲ್ಲಿ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ- ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಕೆ.ಬಾಲಕೃಷ್ಣ ಗಟ್ಟಿ ಆಯ್ಕೆ

ಯುವಧ್ವನಿ ನ್ಯೂಸ್-ಕರ್ನಾಟಕ

ಬಂಟ್ವಾಳ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನ ಸ್ವಾಗತ ಸಮಿತಿ ಸಹಭಾಗಿತ್ವದಲ್ಲಿ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 12 ಮತ್ತು 13ರಂದು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ ಆಯ್ಕೆಯಾಗಿದ್ದಾರೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದ್ದಾರೆ.
ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಸೋಮವಾರ ನಡೆದ “ಪತ್ರಕರ್ತರೊಂದಿಗೆ ಮಾತುಕತೆ” ಕಾರ್ಯಕ್ರಮದಲ್ಲಿ ಅವರು ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.

ನಿರಂತರ ಚಟುವಟಿಕೆ:

ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು ಸಾಹಿತ್ಯದೊಂದಿಗೆ ಯುವಸಮುದಾಯ ಮತ್ತು ಮಕ್ಕಳನ್ನು ತೊಡಗಿಸಿಕೊಳ್ಳುವ ಕಾರ್ಯಕ್ಕೆ ವಿಶೇಷ ಆಧ್ಯತೆ ನೀಡಲಾಗುತ್ತಿದೆ. ಈಗಾಗಲೇ ಉಜಿರೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಯುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಪುತ್ತೂರಿನಲ್ಲಿ ಎರಡು ದಿನಗಳ ತಾಲೂಕು ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಮಂಗಳೂರು ಮತ್ತು ಬಂಟ್ವಾಳದ ಸಮ್ಮೇಳನಕ್ಕೆ ವ್ಯಾಪಕ ಸಿದ್ಧತೆ ನಡೆಯುತ್ತಿದೆ ಎಂದು ಶ್ರೀನಾಥ್ ವಿವರಿಸಿದರು. ಪ್ರತೀ ಊರಿನಲ್ಲಿಯೂ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಪರೂಪದ ಪ್ರತಿಭೆಗಳಿದ್ದಾರೆ, ಹಿರಿಯ ಸಾಧಕರಿದ್ದಾರೆ. ಅಂತಹ ಬೆಳಕಿಗೆ ಬಾರದ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ಹೇಳಿದ ಅವರು, ಬಂಟ್ವಾಳ ತಾಲೂಕಿನಲ್ಲಿ ಮಾಧ್ಯಮರಂಗದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ.ಗಟ್ಟಿಯವರನ್ನು ಈ ಬಾರಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ವಿಶೇಷ ಗೌರವ ನೀಡಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಅಮ್ಮುಂಜೆಯಲ್ಲಿ ನಡೆಯಲಿರುವ ಸಮ್ಮೇಳನದ ಬಗ್ಗೆ ವಿವರಣೆ ನೀಡಿದರು. ಕಸಾಪ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಮಾನ್, ಪದಾಧಿಕಾರಿಗಳಾದ ಗಣೇಶ ಪ್ರಸಾದ ಪಾಂಡೇಲು, ಹರೀಶ್ ಮಾಂಬಾಡಿ, ಚೇತನ್ ಮುಂಡಾಜೆ, ಗೋಪಾಲ ಅಂಚನ್, ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಬುಬಕರ್ ಅಮ್ಮುಂಜೆ, ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಮೌನೇಶ ವಿಶ್ವಕರ್ಮ, ಪತ್ರಕರ್ತರಾದ ವೆಂಕಟೇಶ ಬಂಟ್ವಾಳ, ವಿಷ್ಣುಗುಪ್ತ ಪುಣಚ, ಕಿರಣ್ ಸರಪಾಡಿ, ಕಿಶೋರ್ ಪೆರಾಜೆ, ಚಂದ್ರಶೇಖರ ಕಲ್ಮಲೆ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

ಬಹುಮುಖಿ ಕ್ಷೇತ್ರದ ಅನನ್ಯ ಸಾಧಕ ಪ್ರೊ.ಬಾಲಕೃಷ್ಷ ಗಟ್ಟಿ:

ಪ್ರೊ.ಬಾಲಕೃಷ್ಣ ಗಟ್ಟಿ ಅವರು ಶೈಕ್ಷಣಿಕ, ಸಾಮಾಜಿಕ, ಮಾಧ್ಯಮ ಸಹಿತ ಬಹುಮುಖಿ ಕ್ಷೇತ್ರದ ಅನನ್ಯ ಸಾಧಕರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ. ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕರ್ತವ್ಯ ಸಲ್ಲಿಸುತ್ತಿರುವ ಜತೆಯಲ್ಲೇ ಮಾಧ್ಯಮ ರಂಗದಲ್ಲೂ ತೊಡಗಿಸಿಕೊಂಡಿದ್ದ ಪ್ರೊ.ಬಾಲಕೃಷ್ಣ ಗಟ್ಟಿಯವರಿಗೀಗ 79 ರ ಹರೆಯ.
ಮಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ, ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಂಪಾದಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಪ್ರೊ. ಗಟ್ಟಿ ಅವರು, 1996ರಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ ವಾರ್ತೆ ಎಂಬ ಪತ್ರಿಕೆಯನ್ನೂ ಪ್ರಕಟಿಸಿದವರು.
1998ರಿಂದ 2003ರವರೆಗೆ ಜನವಾಹಿನಿ ಕನ್ನಡ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಗಟ್ಟಿ ಅವರು, ಮಾಧ್ಯಮ ರಂಗದಲ್ಲಿ ಅದೆಷ್ಟೋ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದವರು.
ಬಂಟ್ವಾಳ ತಾಲೂಕು ಉಚಿತ ಕಾನೂನು ನೆರವು ಸಮಿತಿಯ ಸದಸ್ಯರಾಗಿ, ತಾಲೂಕಿನಲ್ಲಿ ಪತ್ರಕರ್ತರ ಸಂಘದ ಸ್ಥಾಪನೆಗೆ ಕಾರಣಕರ್ತರಾಗಿ, ವಿವಿಧ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ಗಟ್ಟಿಯವರು ಲೇಖಕರಾಗಿ, ಅಂಕಣಕಾರರಾಗಿ, ವಿವಿಧ ಸ್ಮರಣ ಸಂಚಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದವರು.

?️ಗೋಪಾಲ ಅಂಚನ್,ಆಲದಪದವು ಸಂಪಾದಕರು
ಯುವಧ್ವನಿ ನ್ಯೂಸ್, ಕರ್ನಾಟಕ
ಮೊಬೈಲ್:9449104318
ಇಮೈಲ್: [email protected]
ವೆಬ್ ಸೈಟ್:
www.yuvadhvani.com