ಹಲೆಪ್ಪಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರ ಉದ್ಘಾಟನೆ, ಶ್ರೀ ದೇವರ ಪ್ರತಿಷ್ಠೆ, ಧಾರ್ಮಿಕ ಸಭೆ

ವಾಮದಪದವು: ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಭಜನಾ ಮಂದಿರದ ಉದ್ಘಾಟನೆ ಹಾಗೂ ಶ್ರೀ ದೇವರ ಪ್ರತಿಷ್ಠೆಯು ಭಾನುವಾರ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ನೇತೃತ್ವದಲ್ಲಿ
ಆಶ್ಲೇಷಾ ಬಲಿ ಪೂಜೆ, ಗಣಹೋಮ, ರಾಮತಾರಕ ಮಂತ್ರ ಹೋಮ, 10.30ರ ಶುಭಮೂಹೂರ್ತದಲ್ಲಿ ಶ್ರೀ ರಾಮ ದೇವರ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಭಕ್ತಿರಸಮಂಜರಿ, ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ ಭಜನಾ ಮಂಗಳ, ಮಹಾಪೂಜೆ ನಡೆಯಿತು


ಮಧ್ಯಾಹ್ನ ನಡೆದ ಧಾರ್ಮಿಕ ಸಭೆ ನಡೆಯನ್ನು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ,
ಧರ್ಮ ಉಳಿದರೆ ದೇಶ ಉಳಿದೀತು.ರಾಷ್ಟ್ರ ದೇವೋಭವ, ದೇಶವನ್ನು ಮಾತೆ ಎನ್ನುವ ಸಂಸ್ಕೃತಿಯ ಜಗತ್ತಿನ ಏಕೈಕ ದೇಶ ನಮ್ಮದು. ಶ್ರದ್ಧಾ ಕೇಂದ್ರಗಳ ಮೂಲಕ ಧರ್ಮ ಉಳಿಸುವ ಕಾರ್ಯವಾಗಬೇಕು. ಭಜನೆಯಿಂದ ಮನಸ್ಸು ಪರಿವರ್ತನೆ ಆಗುತ್ತದೆ, ಮನ ಪರಿವರ್ತನೆಯಿಂದ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನಾದ್ಯಂತ ಹಿಂದೂ ಧರ್ಮದ ಪುನರುತ್ಥಾನ ಕಾರ್ಯ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾಲಘಟ್ಟದಲ್ಲಿ  ಶ್ರೀ ರಾಮಾಂಜನೇಯ ಮಂದಿರ ಸ್ಥಾಪನೆಯಾಗಿರುವುದು ಸಂತಸದ ವಿಚಾರವಾಗಿದೆ ಎಂದರು.  
ಪುಂಜಾಲಕಟ್ಟೆ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ರಾಜೇಂದ್ರ, ಇರ್ವತ್ತೂರು ಗ್ರಾಮ ಪಂಚಾಯತು ಅಧ್ಯಕ್ಷ ಎಂ.ಪಿ.ಶೇಖರ್, ಉಪಾಧ್ಯಕ್ಷೆ ಹರಿಣಾಕ್ಷಿ, ಉದ್ಯಮಿಗಳಾದ ಡಾ.ವರದರಾಜ ಪೈ ಮಾವಿನಕಟ್ಟೆ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಮಡವು ಶ್ರೀ ಬಾಲಸುಬ್ರಹ್ಮಣ್ಯ ಕ್ಷೇತ್ರದ ಮೊಕ್ತೇಸರ ಮೋನಪ್ಪ ಪೂಜಾರಿ ಕಂಡೆತ್ಯಾರು, ಶ್ರೀತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ., ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಯಶೋಧರ ಸಾಲ್ಯಾನ್, ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಹೀರೇಂದ್ರ ಜೈನ್ ಹಲೆಪ್ಪಾಡಿ ಅತಿಥಿಗಳಾಗಿ ಭಾಗವಹಿಸಿದರು.
ಭಜನಾ ಮಂದಿರದ ಗೌರವಾಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು,ಕಾರ್ಯದರ್ಶಿ ವಿನೋದ್ ಪೂಜಾರಿ ಹಲೆಪ್ಪಾಡಿ, ಭಜನಾ ಮಂಡಳಿ ಗೌರವಾಧ್ಯಕ್ಷೆ ಸಂದ್ಯಾ ಎಸ್.ಕೋರ್ನಾಯ, ಅಧ್ಯಕ್ಷ ಪ್ರಶಾಂತ್ ದೇವಾಡಿಗ ಉಪಸ್ಥಿತರಿದ್ದರು.
ಮಂದಿರದ ಉಪಾಧ್ಯಕ್ಷ ಡಾ.ರಾಮಕೃಷ್ಣ ಎಸ್.ಸ್ವಾಗತಿಸಿದರು. ಅಧ್ಯಕ್ಷ
ಕಿರಣ್ ಕೋಟ್ಯಾನ್ ಹಲೆಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಘಟನಾ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಎರ್ಮೆನಾಡು ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಮಂದಿರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ ಶಾಸಕ ರಾಜೇಶ್ ನಾಯ್ಕ್, ಡಾ.ವರದರಾಜ ಪೈ, ಸ್ಥಳದಾನಿ ಪುಷ್ಪಾವತಿ ಕುದ್ಕಂದೋಡಿ ಅವರನ್ನು ಗೌರವಿಸಲಾಯಿತು.