ಬಹುಮುಖಿ ಸಾಧಕ, ಜನಮನಗೆದ್ದ ನಿರೂಪಕ, ಯುವಜನರ ಮಾರ್ಗದರ್ಶಕ-ಎಚ್ಕೆ.ನಯನಾಡು

ನಮ್ಮೂರ ಸಾಧಕರು
ನಮ್ಮೂರ ಸುದ್ದಿ

ಪ್ರಬುದ್ಧ ರಂಗಕಲಾವಿದರಾಗಿ, ಸಾಹಿತಿಯಾಗಿ, ಚಲನಚಿತ್ರ ನಟರಾಗಿ, ಉತ್ತಮ ನಿರೂಪಕರಾಗಿ, ಕಲೆ-ಸಾಹಿತ್ಯ-ಸಾಂಸ್ಕ್ರತಿಕ ಚಟುವಟಿಕೆಗಳ ಸಂಘಟಕರಾಗಿ ಜನಮನಗೆದ್ದವರು ಎಚ್ಕೆ.ನಯನಾಡು. ಬಹುಮುಖಿ ಪ್ರತಿಭೆಯಾದ ಇವರು “ನಮ್ಮೂರ ಸಾಧಕರು” ಎನ್ನುವುದು ನಮ್ಮ ಹೆಮ್ಮೆ.

ಎಚ್ಕೆ.ಅವರ ಬದುಕು-ಸಾಧನೆಯ ನೋಟವೊಂದು ಇಲ್ಲಿದೆ:

ಬಂಟ್ವಾಳ ತಾಲೂಕಿನ ಪಿಲಾತ್ತಬೆಟ್ಟು ಗ್ರಾಮದ ನಯನಾಡು ನಿವಾಸಿಗಳಾದ ಶ್ರೀ ಎಸ್.ನಾರಾಯಣ ಮೂಲ್ಯ ಮತ್ತು ಶ್ರೀಮತಿ ಎಸ್.ಎನ್. ರತ್ನಾವತಿ ದಂಪತಿಗಳ ಪ್ರಥಮ ಪುತ್ರನಾಗಿ 1969ರಂದು ಜನಿಸಿದ ಹರೀಶ್ ಕುಲಾಲ್ ಮುಂದೆ ಎಚ್ಕೆ.ನಯನಾಡು ಎಂದೇ ಪರಿಚಿತರಾದವರು, ಪ್ರಸಿದ್ಧರಾದವರು. ತನ್ನ ಮಾವ
ರಂಗ ನಿರ್ದೇಶಕ ರಮಾ.ಬಿ.ಸಿ.ರೋಡು ಅವರ ಪ್ರೇರಣೆಯಿಂದ ಪ್ರಾಥಮಿಕ ವಿದ್ಯಾಬ್ಯಾಸದ ಹಂತದಲ್ಲೇ ರಂಗಭೂಮಿಯತ್ತ ಒಲವು ತೋರಿದ ಇವರು
ಏಳನೇ ತರಗತಿಯಲ್ಲಿ ಶಂಕರನ ಮದಿಮೆ ಎಂಬ ನಾಟಕ ರಚಿಸಿ ಅಭಿನಯಿಸಿದವರು.ಹೈಸ್ಕೂಲ್ ಹಂತದಲ್ಲಿ ನಾಟಕ, ಛದ್ಮವೇಷ ಮತ್ತಿತರ ಕಲಾಪ್ರಕಾರದಲ್ಲಿ ಸೈ ಎನಿಸಿಕೊಂಡವರು. ನಂತರ ಹಂತಹಂತವಾಗಿ ರಂಗಭೂಮಿಯ ಪಯಣದಲ್ಲಿ ಹೆಜ್ಜೆ ಇಟ್ಟ ಎಚ್ಕೆ. ನಯನಾಡು ನಾಟಕಗಳನ್ನು ಬರೆಯುತ್ತಾ, ಅಭಿನಯಿಸುತ್ತಾ, ನಿರ್ದೇಶನ ಮಾಡುತ್ತಾ ಒಬ್ಬ ಉದಯೋನ್ಮುಖ ಕಲಾವಿದನಾಗಿ ಮೂಡಿಬಂದರು.
ವೃತ್ತಿಯಲ್ಲಿ ಹಲವು ವರ್ಷ ಛಾಯಾಗ್ರಾಹಕರಾಗಿದ್ದ ಎಚ್ಕೆ. ಮುಂದೆ ತನ್ನ ಬದುಕನ್ನು ರಂಗಭೂಮಿಗಾಗಿ ಸಮರ್ಪಿಸಿಕೊಂಡರು.

ನಾಟಕ ರಚನೆಗಾರರಾಗಿ ಎಚ್ಕೆ.:

ಬೆಂಗ್, ಈರ್ ನನಲಾ ಉಲ್ಲರಾ, ಏರೆಡಲಾ ಪನೊಡ್ಚಿ, ಮರ್ಲನ ತಿರ್ಲ್, ಅಮರ್ ದೀಪ, ಜಾತಿದಾಯೆ, ಸಂಗತಿ ಗೊತ್ತುಂಡಾ, ಮುಕ್ಕಾಲ್ ಮೂಜಿ ಗಳಿಗೆ, ಕಂಬುಲ,
ಬಾಚು ಬಾವೆ, ದಾದಂದ್ ಗೊತ್ತಿಜ್ಜಿ, ಉಳ್ಳಾಲದ ರಾಣಿ ಅಬ್ಬಕ್ಕ, ಗೋರ ಕುಂಬಾರೆ ಮೊದಲಾದ ರಂಗ ನಾಟಕಗಳ ರಚನೆಯ ಜತೆಯಲ್ಲಿ ಮಿಲಿಟರಿ ಮಾರಪ್ಪೆ, ಪೊಣ್ಣು ತೂತರಾ, ಸಿಂಗಲ್ ನಂಬರ್, ದಾಲ ಬಲ್ಲಿ, ತೆಲಿಪುಗನ
ಮೊದಲಾದ ಧ್ವನಿ ಸುರುಳಿ ನಾಟಕಗಳನ್ನು ರಚಿಸಿ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದವರು ಎಚ್ಕೆ. ನಯನಾಡು.
ಕೆಲವು ನಾಟಕಗಳು ರತ್ನವರ್ಮ ಹೆಗ್ಗಡೆ ಪ್ರಶಸ್ತಿ, ಯುವಜನ ಮೇಳ ಪ್ರಶಸ್ತಿ, ನಾಟಕೋತ್ಸವ ಪ್ರಶಸ್ತಿ ಪಡೆದಿರುವುದು ಎಚ್ಕೆ.ಅವರ ಸಾಹಿತ್ಯ ರಚನಾ ಸಾಧನೆಗೆ ಸಂದ ಗೌರವವೇ ಸರಿ.

ಸುದೀರ್ಘ ರಂಗಪಯಣ

ಗ್ರಾಮೀಣ ರಂಗಭೂಮಿಯಲ್ಲಿ ಹೊಸ ಪ್ರಯೋಗಗಳನ್ನು ನಡೆಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಎಚ್ಕೆ, ಮುಂದೆ
ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ “ಕಲಾಸಂಗಮ” ತಂಡದಲ್ಲಿ15 ವರ್ಷಗಳ ಕಾಲ ರಂಗ ಪಯಣ ನಡೆಸಿ ಮಂಡೆ ಬಲಿಪುಜಿ, ಸಂಸಾರದ ಸರ್ಕಸ್, ಮಾಮುಗೊಂಜಿ ಮಾಮಿ, ವಿದ್ದು, ಮದಿಮೆ, ಕುಟುಂಬ
ಮೊದಲಾದ ನಾಟಕಗಳಲ್ಲಿ ವಿಭಿನ್ನ ಪಾತ್ರಗಳಿಗೆ ವಿಶಿಷ್ಠವಾಗಿ ಜೀವ ತುಂಬುತ್ತಾ ಪ್ರಬುದ್ಧ ಕಲಾವಿದನಾಗಿ ಕಲಾಲೋಕದಲ್ಲಿ ಮಿಂಚಿದರು.
ಕಳೆದ 6ವರ್ಷಗಳಿಂದ
ಲ.ಕಿಶೋರ್ ಡಿ. ಶೆಟ್ಟಿ ಯವರ ಲಕುಮಿ‌ ತಂಡದ ಕುಸಾಲ್ದ ಕಲಾವಿದೆರ್ ತಂಡದಲ್ಲಿ ದಾದ ಮಲ್ಪೆರಾಪುಂಡು, ನಂಕ್ ಮಾತೆರ್ಲ ಬೋಡು, ರಡ್ಡೆಟ್ಟ್ ಏರೆಡ್ಡೆ, ಎಲ್ಯ ವಿಷಯ ಮಲ್ಲ ಮಲ್ಪೊಡ್ಚಿ, ಬದ್ಕೆರೆಗಾದ್ ಸೈಪಿನಕುಲು, ಒವುಲಾ ಒಂತೆ ದಿನನೇ, ಮಂಗೆ ಮಲ್ಪೊಡ್ಚಿ ಮೊದಲಾದ ನಾಟಕಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ, ಅಭಿಮಾನದ ಕಲಾವಿದನಾಗಿ ರಂಗದಲ್ಲಿ ಮೆರೆದ ಎಚ್ಕೆ, ತನ್ನ ನೈಜ ಅಭಿನಯ, ವಿಶೇಷ ಸಂಭಾಷಣಾ ಶೈಲಿ, ಆಕರ್ಷಕ ಹಾವಭಾವದ ಮೂಲಕ ಪ್ರೇಕ್ಷಕರ ಹೃದಯ ಗೆದ್ದವರು.

ಚಲನಚಿತ್ರ ನಟನಾಗಿ:

ಆರಂಭದಲ್ಲಿ ಅಮ್ಮ ನೀನಿಲ್ಲದೆ, ಭೂಮಿ, ಸಂಕಲ್ಪ ಮೊದಲಾದ ಧಾರವಾಹಿಗಳಲ್ಲಿ ಮಿಂಚಿದ ಎಚ್ಕೆ, ದೇಯಿ ಬೈದೆದಿ, ಮೈ ನೇಮ್ ಈಸ್ ಅಣ್ಣಪ್ಪ, ವಿಕ್ರಾಂತ್ ಸಿನಿಮಾಗಳಲ್ಲಿ ಚಿತ್ರನಟನಾಗಿಯೂ ಶಹಬ್ಬಾಸ್ ಪಡೆದವರು.

ಸಾಹಿತ್ಯಕ್ಕೂ ಸೈ:

ಕವಿಯಾಗಿ, ಕತೆಗಾರನಾಗಿ, ನಾಟಕ ರಚನೆಗಾರನಾಗಿ, ಸಾಹಿತಿಯಾಗಿ ಎಚ್ಕೆ. ಅವರ ಅನನ್ಯ ಪಯಣ.
ಹಲವಾರು ನಾಟಕ, ನೃತ್ಯರೂಪಕ, ಟೈಟಲ್ ಸಾಂಗ್ ಗಳಿಗೆ ಸಾಹಿತ್ಯ ರಚನೆ, ಧ್ಯೇಯ ಗೀತೆಗಳ ರಚನೆ, ಶ್ರೀ ಕ್ಷೇತ್ರ ಪೊಳಲಿಯ ಪುರಲ್ದ ಪ್ರಸಾದ ಹಾಗು ಶ್ರೀ ಧಾಮ ಮಾಣಿಲದ ನಂದಿನಿ ಧ್ವನಿ ಸುರುಳಿಯ ಭಕ್ತಿಗೀತೆಗಳ ರಚನೆಯೊಂದಿಗೆ ಪನೊಡಾ ಬೊಡ್ಚಾ..?, ಮತ್ತು ವಿಕ್ರಾಂತ್ ತುಳು ಚಿತ್ರಗಳಿಗೆ ಸಾಹಿತ್ಯದ ಮೂಲಕ ಜೀವತುಂಬಿದವರೂ ಇವರೇ.

ಬಹುಬೇಡಿಕೆಯ ನಿರೂಪಕರಿವರು

ಎಚ್ಕೆ. ನಯನಾಡು ಈಗ ನಾಡಿನಾದ್ಯಂತ ಬಹುಬೇಡಿಕೆಯ ನಿರೂಪಕರು. ತಾಲೂಕು, ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮಹಾರಾಷ್ಠ್ರ. ದುಬಾಯಿ ಮತ್ತಿತರ ಕಡೆಗಳಲ್ಲೂ ನಡೆದ ಅದೆಷ್ಟೋ ಸಭೆ ಸಮಾರಂಭಗಳಲ್ಲಿ ತನ್ನದೇ ಆದ ಆಕರ್ಷಕ ಶೈಲಿಯ ಸುಮಧುರವಾದ ಸುಲಲಿತ ನಿರೂಪಣೆ ಅದೆಷ್ಟೋ ಜನರ ಮನಸ್ಸನ್ನು ಗೆದ್ದಿದೆ, ಹೃದಯವನ್ನು ತಟ್ಟಿದೆ.
ತುಳು ಭಾಷಾ ಉದ್ಘೋಷಕರಾಗಿ, ನಿರೂಪಕರಾಗಿ, ಸಂಭಾಷಣಾಕಾರರಾಗಿ ಎಚ್ಕೆಯವರು ಹೆಚ್ಚು ಆಪ್ತರಾದವರು, ಆತ್ಮೀಯರಾದವರು. ತುಳು ನಿರೂಪಣೆಯಲ್ಲಿನ ಅಚ್ಚ ತುಳುವಿನ ಪದಪ್ರಯೋಗ, ಭಾಷಾ ಸೊಗಡು, ಧ್ವನಿಯ ಸ್ಪಷ್ಟತೆ ಅವರ ನಿರೂಪಣೆಗೆ ವಿಶೇಷ ಮೆರುಗು ನೀಡಿದೆ, ನಿರೂಪಣೆಯ ಅಂದ-ಚೆಂದವನ್ನು ಹೆಚ್ಚಿಸಿದೆ.

ಸಂಘಟನಾ ಚತುರರಿವರು

ಆಲದಪದವು ಅಕ್ಷರ ಪ್ರತಿಷ್ಠಾನ, ತುಳುಕೂಟ ಬಂಟ್ವಾಳ, ಕುಲಾಲ ಕುಂಬಾರ ಯುವ ವೇದಿಕೆ ಮೊದಲಾದ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಹಲವಾರು ಸಾಹಿತ್ಯ, ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಸಂಘಟನೆಯಲ್ಲೂ ಎಚ್ಕೆ. ನಯನಾಡು ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳ ಗರಿ

ಎಚ್ಕೆ. ಅವರ ಕಲೆ, ಸಾಹಿತ್ಯ ಮತ್ತು ಬಹುಮುಖಿ ಸಾಧನೆಗೆ ಸಂದ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ಹಲವಾರು.
ಬೆಂಗಳೂರಿನ ಸೃಷ್ಠಿ ಕಲಾಭೂಮಿ‌ಯ ತುಳುನಾಡ ಬೊಳ್ಳಿ, ಪಡು ಪಾಲ್ಜಾಲು ಪದ್ಮ ಪೂಜಾರಿ ಗೌರವ ಪ್ರಶಸ್ತಿ ,ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಸೊರ ಮಾಣಿಕ್ಯ ಪ್ರಶಸ್ತಿ, ಸಾಧನಾ ಶ್ರೀ ಪ್ರಶಸ್ತಿ, ಸಾಹಿತ್ಯ ಸಿಂಧೂರ, ಕುಲಾಲ ರತ್ನ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕ್ಷೇತ್ರ ವಜ್ರದೇಹಿ ಮಠದ ಕಲಾ ವಾಚಸ್ಪತಿ ಪ್ರಶಸ್ತಿ, ನಿರೂಪಣ ಚತುರ ಪ್ರಶಸ್ತಿ ಮೊದಲಾದವುಗಳು ಇವರ ಸಾಧನೆಯ ಕಿರೀಟಕ್ಕೆ ಗರಿಯಾದವುಗಳು.

ಸ್ನೇಹಜೀವಿಯಾಗಿ ಎಚ್ಕೆ.

ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿ, ಸಹೃದಯತೆಯ ಸ್ನೇಹಜೀವಿಯಾಗಿ, ಎಲ್ಲರೊಳಗೊಂದಾಗಿ ಬೆರೆತು ಬೆಳೆದ ಎಚ್ಕೆ.ನಯನಾಡು ಬಹುಮುಖಿ ಪ್ರತಿಭೆಯ ಕಣಜ. ಕಲೆಯಲ್ಲಿ ನಿಷ್ಟತೆ, ಅಭಿನಯದಲ್ಲಿ ವಿಭಿನ್ನತೆ, ಸೇವೆಯಲ್ಲಿ ಪ್ರಾಮಾಣಿಕತೆ,
ವ್ಯಕ್ತಿತ್ವದಲ್ಲಿ ಸನ್ನಡತೆಯನ್ನು ಮೈಗೂಡಿಸಿಕೊಂಡಿರುವ ಎಚ್ಕೆಯವರು ಹಲವು ಶಿಷ್ಯಂದಿರನ್ನು ಬೆಳೆಸಿದವರು, ಅವರ ಕಲಾಬದುಕಿಗೆ ಮಾರ್ಗದರ್ಶಕರಾದವರು, ಅಪಾರ ಅಭಿಮಾನಿ ವರ್ಗದ ಗೌರವಕ್ಕೆ ಪಾತ್ರರಾದವರು.
ಎಚ್ಕೆ.ಅವರು ಪತ್ನಿ ಶ್ರೀಮತಿ ಗೀತಾಹರೀಶ್, ಮಕ್ಕಳಾದ ವೈಶಾಖ್ ಎಚ್. ಮತ್ತು ಶಶಾಂಕ್ ಎಚ್.ಅವರ ಚಿಕ್ಕ ಚೊಕ್ಕ ಸಂಸಾರದೊಂದಿಗೆ ಬಂಟ್ವಾಳದ ಮಣಿಹಳ್ಳದ ಮನೆಯಲ್ಲಿ ಬದುಕು ನಡೆಸುತ್ತಿದ್ದಾರೆ. ಎಚ್ಕೆ.ನಯನಾಡು ಅವರ ಬದುಕು ಬಂಗಾರವಾಗಲಿ, ಕಲಾಜೀವನ ಇನ್ನಷ್ಟು ಉಜ್ವಲವಾಗಿ ಬೆಳಗಲಿ ಎಂದು ನಮ್ಮೂರ ಸುದ್ದಿ-ಯುವಧ್ವನಿ ಬಳಗ
ಹಾರೈಸುತ್ತದೆ.

……………………………
O ಅಂಚನ್, ಆಲದಪದವು
ಸಂಪಾದಕರು
ನಮ್ಮೂರ ಸುದ್ದಿ
ಯುವಧ್ವನಿ.ಕಾಂ.
Mob:9449104318
[email protected]